ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೊನೆಗೂ 'ರೈಸಿಂಗ್ ಕಾಶ್ಮೀರ್' ದಿನಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಪ್ರಕರಣವನ್ನು ಬೇಧಿಸಿದ್ದು, ಹಿರಿಯ ಪತ್ರಕರ್ತನ ಕೊಲೆಗೆ ಲಷ್ಕರ್ -ಇ- ತೊಯ್ಬಾ ಉಗ್ರ ಸಂಘಟನೆಯನ್ನು ಹೊಣೆ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್ ಪಿ ಪಣಿ ಅವರು, ಪಾಕಿಸ್ತಾನದಲ್ಲಿ ಶುಜಾತ್ ಬುಖಾರಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ತನಿಖೆಯ ವೇಳೆ ಬುಖಾರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆ ಮಾಡಿದ್ದು, ಪಾಕಿಸ್ತಾನ ಮೂಲಕ ಎಲ್ ಇಟಿ ಉಗ್ರ ಸಜದ್ ಗುಲ್, ಶುಜಾತ್ ಬುಖಾರಿ ವಿರುದ್ಧ ಬ್ಲಾಗ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷದ ಪ್ರಚಾರ ನಡೆಸಿದ್ದ ಎಂದು ಪಣಿ ತಿಳಿಸಿದ್ದಾರೆ.
ಆರೋಪಿಗಳನ್ನು ಪಾಕಿಸ್ತಾನಿ ಎಲ್ ಇಟಿ ಉಗ್ರ ನವೀದ್ ಜಟ್ಟ್, ಬಿಜ್ ಬೇಹಾರದ ಆಜಾದ್ ಅಹ್ಮದ್ ಮಲಿಕ್ ಹಾಗೂ ಸೋಪಟ್ ನ ಮುಜಾಫರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜೂನ್ 14ರಂದು ಇಲ್ಲಿನ ಪ್ರೆಸ್ ಕಾಲೊನಿಯಲ್ಲಿ ಆಂಗ್ಲ ದೈನಿಕದ ಸಂಪಾದಕ ಶುಜಾತ್ ಬುಖಾರಿ ಹಾಗೂ ಅವರ ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.