ನವದೆಹಲಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಜಿಎನ್ ಸಾಯಿಬಾಬಾ ಅವರನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಾಲ್ವರು ತಜ್ಞರ ತಂಡ ಒತ್ತಾಯಿಸಿದೆ.
ಸಾಯಿಬಾಬಾ ಅವರು 15ಕ್ಕೂ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿದ್ದು, ಅವುಗಳಲ್ಲಿ ಕೆಲವು ಮಾರಣಾಂತಿಕ ಕಾಯಿಲಿ ಇವೆ ಎಂಬ ವರದಿಯ ಹಿನ್ನೆಲೆಯಲ್ಲಿ ತಜ್ಞರ ತಂಡ ದೆಹಲಿ ವಿವಿ ಪ್ರೊಫೆಸರ್ ಬಿಡುಗಡೆಗೆ ಆಗ್ರಹಿಸಿದೆ.
ಭಾರತ ಸರ್ಕಾರ ತಕ್ಷಣವೇ ನಾಗಪುರ ಜೈಲಿನಲ್ಲಿರುವ ಸಾಯಿಬಾಬಾ ಅವರ ಚಿಕಿತ್ಸೆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ತಜ್ಞರ ತಂಡ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ನಿರ್ಧಾರವನ್ನು ಸ್ವಾಗತಿಸಿದ ಮಹಾರಾಷ್ಟ್ರದ ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯಕರ್ತ ಆನಂದ್ ತೆಲ್ತುಂಬೆಡ್ ಅವರು, ಸಾಯಿಬಾಬಾ ಅವರ ಬಗ್ಗೆ ಕೇಂದ್ರ ಸರ್ಕಾರ ಪುನರ್ ಪರಿಶೀಲಿಸುವ ವಿಶ್ವಾಸವಿದೆ ಎಂದಿದ್ದಾರೆ.
ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಸಾಯಿಬಾಬಾರನ್ನು 2014ರಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ಗಡ್ ಚಿರೋಲಿ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಯಿಬಾಬಾ ಅವರು ಶೇ.90 ರಷ್ಟು ವಿಕಲಚೇತನರಾಗಿದ್ದು, ವ್ಹೀಲ್‌ಚೇರ್ ಮೂಲಕ ಚಲಿಸುತ್ತಾರೆ.