ಶೋಪಿಯಾನ್ ನಲ್ಲಿ ಇಬ್ಬರು ಉಗ್ರರು, ನಾಲ್ವರು ನಾಗರಿಕರ ಹತ್ಯೆಯ ನಂತರ ಕಾಶ್ಮೀರ ಉದ್ವಿಗ್ನ

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ....
ಭದ್ರತಾ ಸಿಬ್ಬಂದಿ
ಭದ್ರತಾ ಸಿಬ್ಬಂದಿ
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹಾಗೂ ನಾಲ್ವರು ನಾಗರಿಕರು ಮೃತಪಟ್ಟಿದ್ದು, ನಾಗರಿಕರ ಹತ್ಯೆಯನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದ್ದು, ಕಣಿವೆ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಹತ್ಯೆಯಾದ ಲಷ್ಕರ್ ಇ ತೊಯ್ಬಾ ಉಗ್ರ ಆಶಿಕ್ ಹುಸೇನ್ ಭಟ್ ಮತ್ತು ಎಂಫಿಲ್ ಮಾಡುತ್ತಿದ್ದ ನಾಗರಿಕ ಗೋವ್ಹಾರ್ ಅಹ್ಮದ್ ಅವರ ಮೃತದೇಹವನ್ನು ಇಂದು ಬೆಳಗ್ಗೆ ಶೋಪಿಯಾನ್ ಜಿಲ್ಲೆಯ ಪಹ್ನೂ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಇಬ್ಬರು ಉಗ್ರರು ಮತ್ತು ನಾಲ್ವರು ನಾಗರಿಕರನ್ನು ಹತ್ಯೆ ಖಂಡಿಸಿ ಇಂದು ಪ್ರತ್ಯೇಕತಾವಾದಿಗಳ ವಿವಿಧ ಬಣಗಳ ಮುಖಂಡರು ಕಾಶ್ಮೀರ ಕಣಿವೆಯ ವಿವಿಧೆಡೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಶ್ರೀನಗರದ 7 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಕಾಶ್ಮೀರ ಕಣಿವೆಯ ಕೆಲವೆಡೆ ಕರ್ಫ್ಯೂ ಜಾರಿ ಮಾಡಿದ್ದು, ಶಾಲೆಗಳನ್ನು ಬಂದ್ ಮಾಡಲಾಗಿತ್ತು ಮತ್ತು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಜಮ್ಮು ಕಾಶ್ಮೀರ ವಿಮೋಚನಾ ರಂಗದ ಮುಖ್ಯಸ್ಥ ಯಾಸಿನ್ ಮಲ್ಲಿಕ್ ಅವರನ್ನು ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದಾರೆ. ಅನಂತನಾಗ್‌ನಲ್ಲಿ ಘರ್ಷಣೆಗಿಳಿದ ಅನೇಕ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಹ್ನೂ ಗ್ರಾಮದಲ್ಲಿ ಸೇನೆಯ ರಾಷ್ಟ್ರೀಯ ರೈಫಲ್‌ನ ಯೋಧರು ತಮ್ಮ ಸಂಚಾರಿ ತಪಾಸಣಾ ವಾಹನದ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ ಗುಂಡು ಹಾರಿಸಿದಾಗ ಒಬ್ಬ ಉಗ್ರಗಾಮಿ ಮತ್ತು ಇತರ ಮೂವರು ಸತ್ತಿದ್ದರು. ಈ ಮೂವರು ಉಗ್ರಗಾಮಿ ಸಂಘಟನೆಯ ಬಾಹ್ಯ ಕಾರ್ಯಕರ್ತರು ಎಂದು ಸೇನೆ ಹೇಳಿದೆ. ಆದರೆ ಈ ಮೂವರು ನಾಗರಿಕರು ಎಂಬುದು ಜನರ ಮತ್ತು ಪ್ರತ್ಯೇಕತಾವಾದಿಗಳ ವಾದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com