ನವದೆಹಲಿ: ವಿವಿಧ ಸೇವೆಗಳು ಮತ್ತು ಸರ್ಕಾರದ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಜೋಡಣೆ ಮಾಡಲು ಮಾರ್ಚ್ 31ರ ವರೆಗೆ ಗಡುವು ನೀಡಲಾಗಿದ್ದು, ಇದೀಗ ಅದನ್ನು ಮತ್ತೆ ವಿಸ್ತರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಆಧಾರ್ ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ಹೆಚ್ಚಿನ ಕಾಲವಕಾಶದ ಅಗತ್ಯವಿದ್ದರೆ ಸರ್ಕಾರ ಮಾರ್ಚ್ 31ರ ಗಡುವನ್ನು ವಿಸ್ತರಿಸಬಹುದು ಎಂದು ಆಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠಕ್ಕೆ ತಿಳಿಸಿದ್ದಾರೆ.
ಈ ಹಿಂದೆಯೂ ನಾವು ಗಡುವನ್ನು ವಿಸ್ತರಿಸಿದ್ದೇವೆ. ಈಗ ಮತ್ತೆ ಗಡುವು ವಿಸ್ತರಿಸಲು ಸಿದ್ಧರಿದ್ದೇವೆ. ಆದರೆ ಆಧಾರ್ ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ, ವಾದ, ಪ್ರತಿವಾದ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಬೇಕು ಎಂದು ವೇಣುಗೋಪಾಲ್ ಅವರು ಹೇಳಿದ್ದಾರೆ.
ಅಟಾರ್ನಿ ಜನರಲ್ ಅವರು ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ್ದು, ನಾವು ಅರ್ಜಿದಾರರ ಪರ ವಕೀಲರಿಗೆ ಪದೇ ಪದೇ ವಾದ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಮೊಬೈಲ್‌ಗೆ ಆಧಾರ್ ಜೋಡಣೆ ಮಾಡಲು ಹಿಂದೆ ನಿಗದಿ ಮಾಡಲಾಗಿದ್ದ 2018ರ ಫೆಬ್ರುವರಿ 6ರ ಗಡುವನ್ನೂ ಮಾರ್ಚ್ 31ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದೆ.