ಸಾಂದರ್ಭಿಕ ಚಿತ್ರ
ದೇಶ
ನಾಗಾಲ್ಯಾಂಡ್ ನಲ್ಲಿ ಎನ್ ಪಿಎಫ್ ಗೆ ಬೆಂಬಲ ಇಲ್ಲ, ಎನ್ ಡಿಪಿಪಿ ಜತೆ ಸರ್ಕಾರ ರಚನೆ: ಬಿಜೆಪಿ
ತನ್ನ 15 ವರ್ಷ ಹಳೆ ಮಿತ್ರ ಪಕ್ಷ ನಾಗಾ ಪೀಪಲ್ಸ್ ಫ್ರಂಟ್(ಎನ್ ಪಿಎಫ್)ಗೆ ಬೆಂಬಲ ನೀಡಲು ಬಿಜೆಪಿ ನಿರಾಕರಿಸಿದ್ದು,...
ಕೊಹಿಮಾ: ತನ್ನ 15 ವರ್ಷಗಳ ಹಳೆಯ ಮಿತ್ರ ಪಕ್ಷ ನಾಗಾ ಪೀಪಲ್ಸ್ ಫ್ರಂಟ್(ಎನ್ ಪಿಎಫ್)ಗೆ ಬೆಂಬಲ ನೀಡಲು ಬಿಜೆಪಿ ನಿರಾಕರಿಸಿದ್ದು, ಚುನಾವಣಾ ಪೂರ್ವ ಮೈತ್ರಿಯಿಂತೆ ಎನ್ ಡಿಪಿಪಿ ಜೊತೆ ಸೇರಿ ಸರ್ಕಾರ ರಚಿಸುವುದಾಗಿ ಸೋಮವಾರ ಸ್ಪಷ್ಟಪಡಿಸಿದೆ.
ಎನ್ ಡಿಪಿಪಿ ಹಿರಿಯ ನಾಯಕ ನೈಫಿಯು ರಿಯೋ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಹಾಗೂ ನಾಗಾಲ್ಯಾಂಡ್ ಹಣಕಾಸು ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು, ರಾಜ್ಯದಲ್ಲಿ 2008ರಿಂದ ಅಧಿಕಾರದಲ್ಲಿರುವ ಎನ್ ಪಿಎಫ್ ಗೆ ಈ ಬಾರಿ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನಾವು ಎನ್ ಡಿಪಿಪಿ ಜೊತೆ ಸೇರಿ ಸರ್ಕಾರ ರಚಿಸುತ್ತೇವೆ ಎಂದಿರುವ ಶರ್ಮಾ, ಮುಖ್ಯಮಂತ್ರಿ ಟಿಆರ್ ಝೆಲಿಯಂಗ್ ಅವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
60 ಸದಸ್ಯ ಬಲದ ನಾಗಾಲ್ಯಾಂಡ್ ನಲ್ಲಿ ಬಿಜೆಪಿ 12, ಅದರ ಮಿತ್ರ ಪಕ್ಷ ಎನ್ ಡಿಪಿಪಿ 17 ಸ್ಥಾನಗಳನ್ನು ಪಡೆದಿದೆ. ಆದರೆ ಎಪಿಎಫ್ 27 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಈ ಹಿಂದೆ ನಾಗಾಲ್ಯಾಂಡ್ ನಲ್ಲಿ ಎನ್ ಪಿಎಫ್ ನೇತೃತ್ವದ ಸರ್ಕಾರದ ಭಾಗವಾಗಿದ್ದ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಎನ್ ಪಿಎಫ್ ತೊರೆದು ಎನ್ ಡಿಪಿಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಲ್ಲದೆ ರಿಯೋ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಚಾರ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ