ವಿಕ್ರಮ್ ಕೊಠಾರಿ
ದೇಶ
ವಿಕ್ರಮ್ ಕೊಠಾರಿ ಜಾಮೀನು ಅರ್ಜಿ ವಜಾ, ರೋಟೋಮ್ಯಾಕ್ ಮುಖ್ಯಸ್ಥ, ಪುತ್ರ ಜೈಲು ಪಾಲು
ವಿವಿಧ ಬ್ಯಾಂಕ್ ಗಳಿಗೆ 3,695 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರೋಟೋಮ್ಯಾಕ್....
ಲಖನೌ: ವಿವಿಧ ಬ್ಯಾಂಕ್ ಗಳಿಗೆ 3,695 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರೋಟೋಮ್ಯಾಕ್ ಸಂಸ್ಥೆಯ ಮುಖ್ಯಸ್ಥ ವಿಕ್ರಮ್ ಕೊಠಾರಿ ಮತ್ತು ಅವರ ಪುತ್ರ ರಾಹುಲ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಬುಧವಾರ ವಜಾಗೊಳಿಸಿದೆ.
ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಸಿಬಿಐ ನ್ಯಾಯಾಧೀಶ ಎಂಪಿ ಚೌಧರಿ ಅವರು, ಕೊಠಾರಿ ಹಾಗೂ ಅವರ ಪುತ್ರ ರಾಹುಲ್ ಇಬ್ಬರನ್ನು ಮಾರ್ಚ್ 21ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು 11 ದಿನಗಳ ಕಾಲ ತನ್ನ ವಶಕ್ಕೆ ಪಡೆದಿದ್ದ ಸಿಬಿಐ ಇಂದು ಕೋರ್ಟ್ ಗೆ ಹಾಜರುಪಡಿಸಿತು. ಈ ವೇಳೆ ಕೊಠಾರಿ ಅವರು ತಮ್ಮ ವಯಸ್ಸು ಮತ್ತು ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತು. ವಿಕ್ರಮ್ ಕೊಠಾರಿ ಮತ್ತು ಪುತ್ರ ರಾಹುಲ್ ಇಬ್ಬರೂ ಆರೋಗ್ಯವಾಗಿದ್ದು, ಮಧ್ಯಂತರ ಜಾಮೀನು ನೀಡದಂತೆ ಸಿಬಿಐ ಮನವಿ ಮಾಡಿತು. ಸಿಬಿಐ ಮನವಿ ಪುರಸ್ಕರಿಸಿದ ಕೋರ್ಟ್ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೊಠಾರಿ ಸೇರಿದಂತೆ ಬ್ಯಾಂಕ್ ನ ಕೆಲವು ಅಧಿಕಾರಿಗಳು ವಿರುದ್ಧವೂ ಎಫ್ ಐಆರ್ ದಾಖಲಿಸಿದೆ.
ಈ ಮುಂಚೆ ಕೊಠಾರಿ ಬ್ಯಾಂಕ್ ಗಳಿಗೆ ಸುಮಾರು 800 ಕೋಟಿ ರುಪಾಯಿ ವಂಚಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅದು 3, 695 ಕೋಟಿ ರುಪಾಯಿ ತಲುಪಿದೆ.

