ಮೋದಿಯ 'ಅಚ್ಛೆ ದಿನ್', ವಾಜಪೇಯಿಯ 'ಇಂಡಿಯಾ ಶೈನಿಂಗ್' ರೀತಿ ಉಲ್ಟಾ ಹೊಡೆಯಲಿದೆ: ಸೋನಿಯಾ

2004ರಲ್ಲಿ ಅಂದಿನ ವಾಜಪೇಯಿ ಸರ್ಕಾರದ ವಿರುದ್ಧ ಭಾರತ ಪ್ರಕಾಶಿಸುತ್ತಿದೆ(ಇಂಡಿಯಾ ಶೈನಿಂಗ್) ಪ್ರಚಾರ ಉಲ್ಟಾ ಹೊಡೆದ ರೀತಿಯೇ....
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
ಮುಂಬೈ: 2004ರಲ್ಲಿ ಅಂದಿನ ವಾಜಪೇಯಿ ಸರ್ಕಾರದ ವಿರುದ್ಧ ಭಾರತ ಪ್ರಕಾಶಿಸುತ್ತಿದೆ(ಇಂಡಿಯಾ ಶೈನಿಂಗ್) ಪ್ರಚಾರ ಉಲ್ಟಾ ಹೊಡೆದ ರೀತಿಯೇ ಪ್ರಧಾನಿ ನರೇಂದ್ರ ಮೋದಿಯ ಅಚ್ಛೆ ದಿನ್ ಪ್ರಚಾರ ಬಿಜೆಪಿಗೆ ಉಲ್ಟಾ ಹೊಡೆಯಲಿದೆ ಎಂದು ಯುಪಿಎ ಮುಖ್ಯಸ್ಥೆ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಟುಡೇ  ಸಮಾವೇಶದಲ್ಲಿ ಮಾತನಾಡಿದ ಸೋನಿಯಾ, ಬಿಜೆಪಿ ತುಂಬಾ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದೆ. ಆದರೆ ಯಾವುದನ್ನೂ ಈಡೇರಿಸಿಲ್ಲ. ಕೇವಲ ಸಕಾರಾತ್ಮಕ ಚಿತ್ರಣ ಬಿಂಬಿಸುತ್ತಿದ್ದಾರೆ. ಉದ್ಯೋಗ ನೀಡುತ್ತೇವೆ ಮತ್ತು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರುಪಾಯಿ ಜಮೆ ಮಾಡುತ್ತೇವೆ ಎಂದಿದ್ದರು. ಇದು ಜನರಿಗೆ ದೊಡ್ಡ ನಿರಾಶೆ ಮೂಡಿಸಿದೆ. ಹೀಗಾಗಿ ಬಿಜೆಪಿಯ ಅಚ್ಛೆ ದಿನ್ ಇಂಡಿಯಾ ಶೈನಿಂಗ್ ರೀತಿ ಆಗಲಿದೆ ಎಂದಿದ್ದಾರೆ.
2014ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೀಡಿದ್ದ ಭರವಸೆಗಳ ಬಗ್ಗೆ ದೇಶದ ಜನತೆ ತೀವ್ರ ನಿರಾಶೆಗೊಂಡಿದ್ದಾರೆ ಎಂದರು.
2004ರಲ್ಲಿ ವಾಜಪೇಯಿ ಸರ್ಕಾರ ಇಂಡಿಯಾ ಶೈನಿಂಗ್ ಬಗ್ಗೆ ಸಿಕ್ಕಾಪಟ್ಟೆ ಪ್ರಚಾರ ಮಾಡಿತ್ತು. ಆದರೂ ಅಧಿಕಾರಕ್ಕೆ ಬರಲಿಲ್ಲ. ಅದೇ ರೀತಿ ಮೋದಿ ಸರ್ಕಾರ ಸಹ ಯಾವುದೇ ಕಾರಣಕ್ಕೆ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು.
ಇದೇ ವೇಳೆ ಭಾರತದಲ್ಲಿ ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ಒಡೆದು ಆಳ್ವಿಕೆ ಮಾಡುವುದು ಹೆಚ್ಚಾಗುತ್ತಿದೆ. ಭಾರತ ದೇಶ ಎಲ್ಲರಿಗೂ ಸೇರಿದ್ದು. ಯಾವುದೋ ಒಂದು ವರ್ಗಕ್ಕೆ ಸೇರಿದ್ದಲ್ಲ ಎಂದಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ, ಪ್ರತಿದಿನ ಭಯದಲ್ಲೇ ಬದುಕುವ ವಾತಾವರಣವಿದೆ, ಪ್ರತಿಭಟಿಸುವ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ,ಸಮಾಜ ಧ್ರುವೀಕರಣದತ್ತ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ, ವಿರೋಧ ಪಕ್ಷಗಳು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com