ನಿಮ್ಮ ಹೆಸರಲ್ಲಿರುವ ರೈಲ್ವೆ ಟಿಕೆಟ್ ನ್ನು ಇನ್ನೊಬ್ಬರ ಹೆಸರಿಗೆ ಬದಲಿಸಬಹುದು- ಇಲ್ಲಿದೆ ರೈಲ್ವೆ ಮಾರ್ಗಸೂಚಿ

ಒಂದೊಮ್ಮೆ ನೀವು ದೂರದ ಊರಿಗೆ ಪ್ರಯಾಣಿಸಲು ರೈಲ್ವೆ ಟಿಕೆಟ್ ಖರೀದಿಸಿದ್ದೀರಿ, ಆದರೆ ಕೆಲ ದಿನಗಳ ನಂತರ ನಿಮಗೆ ಅಲ್ಲಿಗೆ ತೆರಳಲು ............
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಒಂದೊಮ್ಮೆ ನೀವು ದೂರದ ಊರಿಗೆ ಪ್ರಯಾಣಿಸಲು ರೈಲ್ವೆ ಟಿಕೆಟ್ ಖರೀದಿಸಿದ್ದೀರಿ, ಆದರೆ ಕೆಲ ದಿನಗಳ ನಂತರ ನಿಮಗೆ ಅಲ್ಲಿಗೆ ತೆರಳಲು ಮನಸ್ಸಾಗದಿರಬಹುದು, ಆಗ ನೀವು ಕಾಯ್ದಿರಿಸಿದ್ದ ಟಿಕೆಟ್ ನ್ನು ರದ್ದುಗೊಳಿಸಲೇಬೇಕು ಎಂದೇನೂ ಇಲ್ಲ. ಇದಕ್ಕೆ ಬದಲಾಗಿ ನಿಮ್ಮ ಟಿಕೆಟ್ ನಲ್ಲಿಯೇ ಇನ್ನೋರ್ವ ಪ್ರಯಾಣಿಕ - ನಿಮ್ಮ ಕುಟುಂಬದವರು, ಸ್ನೇಹಿತರುಕೂಡ ಪ್ರಯಾಣಿಸಲು ಅವಕಾಶವಿದೆ. ಇಂತಹಾ ಒಂದು ಮಹತ್ವದ ಯೋಜನೆಯನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ.
ಹಾಗಾದರೆ ಯಾವೆಲ್ಲಾ ಸಂದರ್ಭದಲ್ಲಿ ನೀವು ನಿಮ್ಮವರ ಹೆಸರಿಗೆ ನಿಮ್ಮ ಟಿಕೆಟ್ ಬದಲಿಸಿಕೊಳ್ಳಬಹುದು, ಇಲ್ಲಿದೆ ಮಾಹಿತಿ-
"ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿರುವ ಮುಖ್ಯ ಮೀಸಲು ಮೇಲ್ವಿಚಾರಕರು ನಿಮ್ಮ ಹೆಸರಿನಲ್ಲಿ ಕಾಯ್ದಿರಿಸಿದ್ದ ಆಸನ ಅಥವಾ ಬರ್ತ್ ನ್ನು ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ವರ್ಗಾಯಿಸುವ ಅಧಿಕಾರ ಹೊಂದಿರುತ್ತಾರೆ" ರೈಲ್ವೆ ಇಲಾಖೆ ಬಿಡುಗಡೆಗೊಳಿಸಿದ ಹೇಳಿಕೆಯೊಂದು ಈ ಮಾಹಿತಿ ನೀಡಿದೆ.
  • ಪ್ರಯಾಣಿಕರು ಸರ್ಕಾರಿ ನೌಕರರಾಗಿದ್ದ ಪಕ್ಷದಲ್ಲಿ, ಆತ ಅಥವಾ ಆಕೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರೆ ಅಂತಹಾ ವ್ಯಕ್ತಿಗಳು ರೈಲು ನಿರ್ಗಮನದ 24 ಗಂಟೆಗಳಿಗೆ ಮೊದಲು ಹೆಸರು ಬದಲಾವಣೆಯನ್ನು ಕೋರಿ ಲಿಖಿತ ಕೋರಿಕೆ ಸಲ್ಲಿಸಬಹುದಾಗಿದೆ. ಹಾಗೆ ಮಾಡಿದಲ್ಲಿ ಯಾರ ಹೆಸರಿನ ಟಿಕೆಟ್ ಇನ್ನಾರ ಹೆಸರಿಗೆ ವರ್ಗಾವಣೆ ಮಾಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿಅದೇ ರೀತಿಯಲ್ಲಿ ಟಿಕೆಟ್ ನಲ್ಲಿ ಹೆಸರನ್ನು ಬದಲಿಸಲಾಗುತ್ತದೆ.
  • ಇನ್ನು ಯಾವುದೇ ವ್ಯಕ್ತಿ ತನ್ನ ಕುಟುಂಬದ ಇತರರಿಗೆ ಎಂದರೆ- ತಂದೆ, ತಾಯಿ, ಸೋದರ, ಸೋದರಿ, ಪತಿ, ಪತ್ನಿ ಹೀಗೆ ಯಾವ ವ್ಯಕ್ತಿಯ ಹೆಸರಿನಲ್ಲಿ ಟಿಕೆಟ್ ಬದಲಿಸಲು ಅವಕಾಶವಿದ್ದು ರೈಲು ಹೊರಡಲಿರುವ 24 ಗಂಟೆಗಳೊಳಗೆ ಟಿಕೆಟ್ ಖಾತ್ರಿಯಾಗಿರುವ ವ್ಯಕ್ತಿಯು ಲಿಖಿತ ಮನವಿಯನ್ನು ಸಲ್ಲಿಸಿ ತನ್ನ ಕುಟುಂಬ ಸದಸ್ಯರ ಹೆಸರಿಗೆ ಟಿಕೆಟ್ ವರ್ಗಾವಣೆ ಮಾಡಿಸಬಹುದಾಗಿದೆ.
  • ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸಿದ ವ್ಯಕ್ತಿ ಯಾವುದೇ ದೃಢೀಕರಿಸಲ್ಪಟ್ಟ ವಿಶ್ವವಿದ್ಯಾನಿಲಯ, ಶಾಲೆ, ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿಯಾಗಿದ್ದಲ್ಲಿ ಅಂತಹಾ ವ್ಯಕ್ತಿ ಸಹ ಟಿಕೆಟ್ ನ್ನು ಬದಲಿಸಲು ಅವಕಾಶವಿದೆ. ರೈಲು ನಿರ್ಗಮಿಸುವ 48 ಗಂಟೆಗೆ ಮುಂಚಿತವಾಗಿ ಆ ವಿದ್ಯಾರ್ಥಿ ಅಭ್ಯಾಸ ನಡೆಸುತ್ತಿರುವ ಶಿಕ್ಷಣ ಸಂಸ್ಥೆ ಇದಕ್ಕಾಗಿ ಲಿಖಿತ ವಿನಂತಿಯನ್ನು ಮಾಡಿಕೊಳ್ಳಬೇಕಿದೆ. ಇಂತಹಾ ಲಿಖಿತ ವಿನಂತಿಯ ಮೂಲಕ ಸಂಸ್ಥೆಯ ಓರ್ವ ವಿದ್ಯಾರ್ಥಿಯ ಹೆಸರಲ್ಲಿದ್ದ ಟಿಕೆಟ್ ನ್ನು ಅದೇ ಸಂಸ್ಥೆಯ ಇನ್ನೋರ್ವ ವಿದ್ಯಾರ್ಥಿಯ ಹೆಸರಿಗೆ ವರ್ಗಾವಣೆ ಮಾಡಬಹುದಾಗಿದೆ.
  • ಒಂದೊಮ್ಮೆ ಟಿಕೆಟ್ ಕಾಯ್ದಿರಿಸಿದ್ದ ವ್ಯಕ್ತಿ ಮದುವೆ ಕಾರ್ಯಕ್ರಮ ನಡೆಯುವ ಕುಟುಂಬ ಅಥವಾ ಗುಂಪಿನವನಾದರೆ ರೈಲ್ವೆ ಟಿಕೆಟ್ ವರ್ಗಾವಣೆ ಮಾಡುವ ಸಂಬಂಧ ಆತನ ಗುಂಪಿನ ಮುಖ್ಯಸ್ಥರಿಂದ ಲಿಖಿತ ಮನವಿಯನ್ನು ಸಲ್ಲಿಸಬೇಕಾಗುವುದು. ನಿಗದಿತ ರೈಲು ನಿರ್ಗಮನದ 48 ಗಂಟೆಗಳಿಗೆ ಮುನ್ನ ಕೋರಿಕೆ ಸಲ್ಲಿಸಿದಲ್ಲಿ ಮದುವೆ ಸಮಾಂರಂಭದ ಗುಂಪಿನ ಓರ್ವ ವ್ಯಕ್ತಿಯ ಹೆಸರಲ್ಲಿದ್ದ ಟಿಕೆಟ್ ನು  ಅದೇ ಗುಂಪಿನ ಇನ್ನೋರ್ವ ವ್ಯಕ್ತಿ ಹೆಸರಿಗೆ ಬದಲಿಸಲು ಅವಕಾಶವಿದೆ.
  • ಇನ್ನು ಎನ್  ಸಿಸಿ ಕ್ಯಾಡೆಟ್ ಗಳು ಒಂದೊಮ್ಮೆ ತಾವು ಗುಂಪು ಪ್ರಯಾಣ (ಗ್ರೂಪ್ ಟ್ರಾವೆಲ್) ಗಾಗಿ ಟಿಕೆಟ್ ಅಥವಾ ಬರ್ತ್ ಕಾಯ್ದಿರಿಸಿದ್ದರೆ, ಅವರು ತಮ್ಮ ಹೆಸರಲ್ಲಿನ ಟಿಕೆಟ್ ನ್ನು ಇನ್ನೊಂದು ಅದೇ ರೀತಿಯ ಗುಂಪಿಗೆ ವರ್ಗಾಯಿಸಲು ಬಯಸಿದಲ್ಲಿ ಆಯಾ ಗುಂಪಿನ ಮುಖ್ಯಸ್ಥರು ನಿಗದಿತ ರೈಲು ನಿರ್ಗಮನಕ್ಕೆ 24 ಗಂಟೆಗೆ ಮುನ್ನ ಲಿಖಿತ ಮನವಿ ಸಲ್ಲಿಕೆ ಮಾಡಬೇಕಾಗುವುದು.
ಇದಾಗ್ಯೂ ಇಂತಹಾ ಕೋರಿಕೆ ಅಥವಾ ಮನವಿಯನ್ನು ಓರ್ವ ವ್ಯಕ್ತಿ ಅಥವಾ ಸಂಸ್ಥೆಯಿಂದ ಒಂದು ಬಾರಿ ಮಾತ್ರವೇ ಪುರಸ್ಕರಿಸಲಾಗುವುದು. ಇನ್ನು ಎನ್ ಸಿಸಿ, ವಿವಾಹದ ತಯಾರಿಯಲ್ಲಿನ ಗುಂಪು, ವಿದ್ಯಾರ್ಥಿಗಳ ವಿಚಾರದಲ್ಲಿ ಸಹ ಒಟ್ಟಾರೆ ಗುಂಪಿನ ಶೇ. 10 ರಷ್ಟು ಮಂದಿಯ ಕೋರಿಕೆ ಮಾತ್ರವೇ ಈಡೇರಲಿದ್ದು ಶೇ 10ಕ್ಕಿಂತ ಹೆಚ್ಚಿನ ಪ್ರಮಾಣದ ಸದಸ್ಯರಿಂದ ಟಿಕೆಟ್ ಬದಲಾವಣೆ ಕೋರಿಕೆ ಬಂದಲ್ಲಿ ಅದು ತಿರಸ್ಕರಿಸಲ್ಪಡುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com