ಮುಂಬೈ: ಮಾರ್ಚ್ 18ರಿಂದ ದೇಶಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಓಲಾ ಹಾಗೂ ಉಬರ್ ಟ್ಯಾಕ್ಸಿ ಚಾಲಕರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಭಾನುವಾರ ಮಧ್ಯರಾತ್ರಿಯಿಂದ ಮುಷ್ಕರ ನಡೆಸುವುದಾಗಿ ಉಬರ್ ಮತ್ತು ಓಲಾ ಚಾಲಕರು ಬೆದರಿಕೆ ಹಾಕಿದ್ದು, ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಪುಣೆ ಹಾಗೂ ಗುರ್ಗಾಂವ್ ನಲ್ಲಿ ಮುಷ್ಕರದ ಎಫೆಕ್ಟ್ ಹೆಚ್ಚಾಗಿರಲಿದೆ.
ಓಲಾ ಹಾಗೂ ಉಬರ್ ಕಂಪನಿಗಳು ಚಾಲಕರಿಗೆ ದೊಡ್ಡ ಭರವಸೆ ನೀಡಿದ್ದವು. ಆದರೆ ನೀಡಿದ್ದ ಭರವಸೆ ಈಡೇರಿಸದಿದ್ದರಿಂದ ಚಾಲಕರ ಆದಾಯ ಖೋತಾ ಆಗ್ತಿದೆ. ಚಾಲಕರು 5-7 ಲಕ್ಷ ರುಪಾಯಿ ಬಂಡವಾಳ ಹೂಡಿದ್ದು, ಅದಕ್ಕೆ ಪ್ರತಿ ತಿಂಗಳು ಕನಿಷ್ಟ 1.5 ಲಕ್ಷ ಆದಾಯ ನಿರೀಕ್ಷೆ ಮಾಡುತ್ತಿದ್ದಾರೆ. ಈಗ ಅದರ ಅರ್ಧದಷ್ಟು ಸಹ ಬರುತ್ತಿಲ್ಲ. ಇದಕ್ಕೆ ಕಂಪನಿಗಳ ಕೆಟ್ಟ ನಿರ್ವಹಣೆಯೇ ಕಾರಣ ಎಂದು ಮುಷ್ಕರ ಆಯೋಜಿಸಿರುವ ಮಹಾರಾಷ್ಟ್ರ ನವ ನಿರ್ಮಾಣ ವಹಾತುಕ್ ಸೇನೆಯ ಸಂಜಯ್ ನಾಯಕ್ ಅವರು ಹೇಳಿದ್ದಾರೆ.
ಮೊದಲು ಭರವಸೆ ನೀಡಿದಂತೆ ಪ್ರತಿ ತಿಂಗಳು ಕನಿಷ್ಟ 1.25 ಲಕ್ಷ ರುಪಾಯಿ ಆದಾಯ ಬರುವಂತೆ ಈ ಕಂಪನಿಗಳು ನೋಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮುಂಬೈ ನಗರವೊಂದರಲ್ಲೇ ಸುಮಾರು 45,000 ಓಲಾ ಹಾಗೂ ಉಬರ್ ಕ್ಯಾಬ್ ಗಳಿವೆ.