ತಂಬಾಕು ಸೇವನೆ ವಿರುದ್ಧ ನನ್ನನ್ನು ಯಾರಾದರು ಎಚ್ಚರಿಸಬೇಕಿತ್ತು: ಶರದ್ ಪವಾರ್

ತಮಗಿದ್ದ ತಂಬಾಕು ಮತ್ತು ಸುಪಾರಿ ಸೇವನೆಯ ವ್ಯಸನದಿಂದ ಇಂದು ವಿಷಾದವುಂಟಾಗುತ್ತಿದ್ದು, ಈ ...
ಶರದ್ ಪವಾರ್
ಶರದ್ ಪವಾರ್

ಮುಂಬೈ: ತಮಗಿದ್ದ ತಂಬಾಕು ಮತ್ತು ಸುಪಾರಿ ಸೇವನೆಯ ವ್ಯಸನದಿಂದ ಇಂದು ವಿಷಾದವುಂಟಾಗುತ್ತಿದ್ದು, ಈ ಜೀವಹಾನಿಯ ಅಭ್ಯಾಸವನ್ನು ಬಿಡಲು 40 ವರ್ಷಗಳ ಹಿಂದೆಯೇ ಯಾರಾದರೂ ಎಚ್ಚರಿಸಬೇಕಿತ್ತು ಎಂದು ನನಗೆ ಈಗ ಅನಿಸುತ್ತಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಕ್ಯಾನ್ಸರ್ ಮಾರಣಾಂತಿಕ ರೋಗದಿಂದ ಬಚಾವಾಗಿರುವ ಶರದ್ ಪವಾರ್ ನಿನ್ನೆ ಮುಂಬೈಯಲ್ಲಿ ಭಾರತೀಯ ಡೆಂಟಲ್ ಅಸೋಸಿಯೇಷನ್ ಮಿಷನ್ ಏರ್ಪಡಿಸಿದ್ದ 2022ರ ವೇಳೆಗೆ ಬಾಯಿ ಕ್ಯಾನ್ಸರ್ ನ್ನು ಹೊಡೆದೋಡಿಸುವ ಕುರಿತ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

ಕ್ಯಾನ್ಸರ್ ಕಾಣಿಸಿಕೊಂಡ ನಂತರ ಶಸ್ತ್ರಚಿಕಿತ್ಸೆ, ಹಲ್ಲುಗಳನ್ನು ತೆಗೆಯುವುದು ಇತ್ಯಾದಿಗಳಿಂದ ತಾವು ವಿಪರೀತ ತೊಂದರೆ ಮತ್ತು ನೋವುಗಳನ್ನು ಅನುಭವಿಸಿದ್ದು ಬಾಯಿ ತೆರೆಯಲು ಕೂಡ ಸಾಧ್ಯವಾಗದ ಪರಿಸ್ಥಿತಿಯಿತ್ತು. ಮಾತನಾಡಲು ಮತ್ತು ಆಹಾರ ನುಂಗಲು ಕೂಡ ಕಷ್ಟವಾಗುತ್ತಿತ್ತು ಎಂದು ತಮ್ಮ ಕಷ್ಟದ ದಿನಗಳನ್ನು ಮಾಜಿ ಕೇಂದ್ರ ಸಚಿವರೂ ಆಗಿರುವ ಶರದ್ ಪವಾರ್ ಮೆಲುಕು ಹಾಕುತ್ತಾರೆ.

ಇಂದು ದೇಶದಲ್ಲಿ ಲಕ್ಷಾಂತರ ಜನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.

ಭಾರತೀಯ ಡೆಂಟಲ್ ಅಸೋಸಿಯೇಷನ್ ಬಾಯಿ ಕ್ಯಾನ್ಸರ್ ನ್ನು ಹೋಗಲಾಡಿಸಲು ಮತ್ತು ತಂಬಾಕು ಸೇವನೆಯನ್ನು ಜನರು ಕಡಿಮೆ ಮಾಡಲು ತೊಟ್ಟಿರುವ ಪಣಕ್ಕೆ ಕೈಜೋಡಿಸುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com