ನವದೆಹಲಿ: ರಾಜ್ಯಸಭೆ ಸದಸ್ಯರು ಪದೇ ಪದೇ ಕಲಾಪಕ್ಕೆಅಡ್ಡಿಪಡಿಸುತ್ತಿರುವುದರಿಂದ ಬೇಸರಗೊಂಡ ಸಭಾಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮೇಲ್ಮನೆ ಸದಸ್ಯರಿಗಾಗಿ ಬುಧವಾರ ಆಯೋಜಿಸಿದ್ದ ಔತಣಕೂಟವನ್ನು ರದ್ದುಪಡಿಸಿದ್ದಾರೆ.
ಔತಣ ಕೂಟಕ್ಕಾಗಿ ಕಳೆದ ವಾರದಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಭಯ ಸದನಗಳ ಸಭಾ ನಾಯಕರು, ವಿರೋಧ ಪಕ್ಷದ ನಾಯಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಬಜೆಟ್ ಅಧಿವೇಶನ ಪ್ರಾರಂಭವಾದ ದಿನದಿಂದಲೂ ರಾಜ್ಯ ಸಭೆಯಲ್ಲಿ ಸುಗಮ ಕಲಾಪ ನಡೆದಿಲ್ಲ. ರಾಜ್ಯಸಭಾ ಸದಸ್ಯರು ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದರು. ನಾಯ್ಡು ಅವರು ಮಂಗಳವಾರ ಸಹ ಪರಿಸ್ಥಿತಿ ಸುಧಾರಿಸಬಹುದು ಎಂದು ಕಾಯುತ್ತಿದ್ದರು. ಆದರೆ ಇಂದೂ ರಾಜ್ಯ ಸಭೆಯಲ್ಲಿ ಗದ್ದಲ ಮುಂದುವರೆದಿತ್ತು.
ಈ ಹಿನ್ನೆಲೆಯಲ್ಲಿ ನಾಯ್ಡು ಅವರು ರಾಜಕೀಯ ಪಕ್ಷಗಳ ನಾಯಕರನ್ನು ತಮ್ಮ ಕಚೇರಿಗೆ ಕರೆದು ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಜತೆಗೆ ಇದೇ ಸಂದರ್ಭದಲ್ಲಿ ಔತಣಕೂಟವನ್ನು ರದ್ದುಪಡಿಸಿರುವ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.