ದೇಶದ 62 ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿದ ಯುಜಿಸಿ

ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು), ಬನಾರಸ್ ಹಿಂದೂ ...
ಜೆಎನ್ ಯು ಕ್ಯಾಂಪಸ್
ಜೆಎನ್ ಯು ಕ್ಯಾಂಪಸ್

ನವದೆಹಲಿ: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು), ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್ ಯು), ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ(ಎಎಮ್ ಯು), ಇಂಧನ ಮತ್ತು ಸಂಪನ್ಮೂಲ ಶಿಕ್ಷಣ ಸಂಸ್ಥೆ(ಟೆರಿ) ಮತ್ತು ಹೈದಾರಾಬಾದ್ ವಿಶ್ವವಿದ್ಯಾಲಯ ಸೇರಿದಂತೆ 62 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಸಂಪೂರ್ಣ ಸ್ವಾಯತ್ತತೆ ನೀಡಿ ಅನುಮೋದನೆ ನೀಡಿದೆ. ಈ ಶಿಕ್ಷಣ ಸಂಸ್ಥೆಗಳು ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡಿವೆ ಎಂದು ಯುಜಿಸಿ ಹೇಳಿದೆ.

ಇಂದು ಬೆಳಗ್ಗೆ ನಡೆದ ಯುಜಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, 5 ಕೇಂದ್ರ ವಿಶ್ವವಿದ್ಯಾಲಯಗಳು, 21 ರಾಜ್ಯ ವಿಶ್ವವಿದ್ಯಾಲಯಗಳು, 26 ಖಾಸಗಿ ವಿಶ್ವವಿದ್ಯಾಲಯಗಳು ಮತ್ತು 10 ಕಾಲೇಜುಗಳಿಗೆ ಸ್ವಾಯತ್ತತೆಯನ್ನು ಸ್ವಾಯತ್ತತೆ ಕಾಲೇಜುಗಳ ನಿಯಂತ್ರಣದಡಿಯಲ್ಲಿ ನೀಡಲಾಯಿತು.

ಯುಜಿಸಿಯ ಈ ನಿರ್ಧಾರ ಐತಿಹಾಸಿಕವಾಗಿದ್ದು ಇದರಿಂದ ಸ್ವಾಯತ್ತತೆಯ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರವೇಶ ಪ್ರಕ್ರಿಯೆ, ಶುಲ್ಕ ವಿಧಾನ ಮತ್ತು ಪಠ್ಯಕ್ರಮಗಳನ್ನು ಅನುಸರಿಸಲು ಹೆಚ್ಚು ಅನುಕೂಲವಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಬಣ್ಣಿಸಿದ್ದಾರೆ.

ಇಂದು ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ದಿನವಾಗಿದೆ. ಈ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ಸಿಗುತ್ತಿದ್ದು ಈ ಮೂಲಕ ಶಿಕ್ಷಣ ಸಂಸ್ಥೆಗಳು ಹೊಸ ಕೋರ್ಸ್ ಗಳು, ಹೊಸ ವಿಭಾಗಗಳು, ಕಾರ್ಯಕ್ರಮಗಳು, ಕ್ಯಾಂಪಸ್ಸೇತರ, ಕೌಶಲ್ಯಾಭಿವೃದ್ಧಿ ಕೋರ್ಸ್ ಗಳು, ಸಂಶೋಧನೆ ಪಾರ್ಕ್, ವಿದೇಶಿ ಫ್ಯಾಕಲ್ಟಿಗಳ ನೇಮಕ, ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿ, ಹಲವು ಪ್ರೋತ್ಸಾಹಕ ಸವಲತ್ತುಗಳು, ಆನ್ ಲೈನ್ ದೂರಶಿಕ್ಷಣ ಇತ್ಯಾದಿಗಳನ್ನು ಆರಂಭಿಸಬಹುದು ಎಂದು ಜಾವದೇಕರ್ ಸುದ್ದಿಗಾರರಿಗೆ ತಿಳಿಸಿದರು.

ಅಲ್ಲದೆ ಈ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಂಪರ್ಕವನ್ನು ವಿಶ್ವದ ಅತ್ಯುನ್ನತ 500 ಶಿಕ್ಷಣ ಸಂಸ್ಥೆಗಳೊಂದಿಗೆ ಹೊಂದಬಹುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com