ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ನಿಲುವಳಿ ಸೂಚನೆ ಮಂಡನೆಗೆ ಕಾಂಗ್ರೆಸ್ ನಿರ್ಧಾರ
ನವದೆಹಲಿ: ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದು ಕಾಂಗ್ರೆಸ್ ಪ್ರಕಟಿಸಿದೆ. ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯಿಂದ ಹತರಾದ ಭಾರತೀಯರ ಕುಟುಂಬವನ್ನು ಹಾದಿತಪ್ಪಿಸುವ ಕೆಲಸವನ್ನು ಸಚಿವೆ ಸುಷ್ಮಾ ಸ್ವರಾಜ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಳೆದ ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಸಚಿವೆ ಸುಷ್ಮಾ ಸ್ವರಾಜ್, ಐಎಸ್ ಉಗ್ರಗಾಮಿಗಳಿಂದ 2014ರಲ್ಲಿ ಅಪಹರಿಸಲ್ಪಟ್ಟ 39 ಭಾರತೀಯರನ್ನು ಕೊಲ್ಲಲಾಗಿದೆ ಎಂದು ಹೇಳಿದ್ದರು. ಅದೇ 4 ವರ್ಷಗಳ ಹಿಂದೆ ಸಚಿವೆ ಅಪಹರಕ್ಕೀಡಾದ ಭಾರತೀಯರು ಜೀವಂತವಾಗಿದ್ದರು ಎಂದು ಹೇಳಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
39 ಭಾರತೀಯರ ಕುಟುಂಬದವರು ಮತ್ತು ಸದನ ಸದಸ್ಯರನ್ನು ಹಾದಿತಪ್ಪಿಸಿದ ವಿದೇಶಾಂಗ ಸಚಿವೆ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ನಾವು ನಿರ್ಧರಿಸಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಅಂಬಿಕಾ ಸೋನಿ ತಿಳಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕೂಡ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟೀಕಿಸಿದ್ದು ತಪ್ಪು ಮಾಹಿತಿ ನೀಡಿ ಹಾದಿತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದರು.
39 ಮಂದಿ ಭಾರತೀಯರಲ್ಲಿ ಅತಿ ಹೆಚ್ಚಿನವರು ಪಂಜಾಬ್ ಮೂಲದವರಾಗಿದ್ದು ಇರಾಕ್ ನ ಮೊಸಲ್ ನಲ್ಲಿ ಕೆಲಸ ಮಾಡುತ್ತಿದ್ದು 2014ರಲ್ಲಿ ತಮ್ಮ ಸ್ಥಳಾಂತರಿಸುವಾಗ ಅಪಹರಿಸಲ್ಪಟ್ಟರು.

