ಮುಂಬೈ: ಬಹುತೇಕ ನ್ಯಾಯಾಧೀಶರು ಬಾಕಿ ಉಳಿದ ಮತ್ತು ತುರ್ತು ವಿಚಾರಣೆಗೆ ಬಂದಿದ್ದ ಅರ್ಜಿಗಳನ್ನು ಸಂಜೆ 5 ಗಂಟೆಯೊಳಗೇ ಪೂರ್ಣಗೊಳಿಸಲು ಯತ್ನಿಸುತ್ತಾರೆ ಇಲ್ಲವೇ ವಿಚಾರಣೆ ಮುಂದೂಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಬಾಂಬೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ತುರ್ತು ಪರಿಹಾರ ಕೋರಿ ಬಂದಿದ್ದ ಅರ್ಜಿಗಳನ್ನು ಬೆಳಗಿನ ಜಾವ 3.30ರ ವರೆಗೆ ವಿಚಾರಣೆ ನಡೆಸಿ ಹೊಸ ದಾಖಲೆ ಬರೆದಿದ್ದಾರೆ.
ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಶಾರುಖ್ ಜೆ ಕಥವಲ್ಲ ಅವರು ಬೇಸಿಗೆ ರಜೆ ಆರಂಭವಾಗುವ ಮುನ್ನಾ ದಿನ ಬೆಳಗಿನ ಜಾವ 3.30ರ ವರೆಗೆ ಪ್ರಕರಣಗಳ ವಿಚಾರಣೆ ನಡೆಸಿ, ಆದೇಶ ನೀಡಿದ್ದಾರೆ.
ಹಿರಿಯ ವಕೀಲರು, ಅರ್ಜಿದಾರರ ಪರ ವಕೀಲರು ಹಾಗೂ ಅರ್ಜಿದಾರರು ಇಡೀ ರಾತ್ರಿ ಕೋರ್ಟ್ ರೂಂನಲ್ಲಿ ಹಾಜರಿದ್ದರು. ತುರ್ತು ಪರಿಹಾರ ಕೋರಿ ಸುಮಾರು 100 ಅರ್ಜಿಗಳು ಬಂದಿದ್ದವು ಎಂದು ಬೆಳಗಿನ ಜಾವ 3.30ರ ವರೆಗೂ ಕೋರ್ಟ್ ನಲ್ಲಿ ಹಾಜರಿದ್ದ ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.
ನ್ಯಾಯಾಧೀಶ ಕಥವಲ್ಲ ಅವರು ಇದೇ ಮೊದಲ ಬಾರಿಗೆ ಬೆಳಗಿನ ಜಾವದವರೆಗೆ ವಿಚಾರಣೆ ನಡೆಸಿದ್ದಾರೆ. ಕಳೆದ ವಾರ ತಮ್ಮ ಕೊಠಡಿಯಲ್ಲೇ ಮಧ್ಯರಾತ್ರಿವರೆಗೆ ಕಾರ್ಯನಿರ್ವಹಿಸಿದ್ದರು.
ಬೆಳಗಿನ ಜಾವದವರೆಗೆ ವಿಚಾರಣೆ ನಡೆಸಿದರೂ ನ್ಯಾಯಾಧೀಶ ಕಥವಲ್ಲ ಅವರು ಸ್ವಲ್ಪವೂ ಸುಸ್ತಾದಂತೆ ಕಾಣಲಿಲ್ಲ. ನನ್ನ ಅರ್ಜಿ ಕೊನೆಯದಾಗಿ ವಿಚಾರಣೆ ಬಂದಿತು. ನಮ್ಮ ವಾದವನ್ನೂ ಪೂರ್ಣವಾಗಿ ಆಲಿಸಿ ಆದೇಶ ನೀಡಿದ್ದಾರೆ ಎಂದು ಮತ್ತೊಬ್ಬ ಹಿರಿಯ ವಕೀಲ ಪ್ರವೀಣ್ ಸಮದಾನಿ ಅವರು ತಿಳಿಸಿದ್ದಾರೆ.