ಸಿಜೆಐ ವಿರುದ್ಧ ನಿಲುವಳಿ ನೋಟಿಸ್ ತಿರಸ್ಕಾರ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಕಾಂಗ್ರೆಸ್ ಸಂಸದರು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಂಸದರು ಸಲ್ಲಿಸಿದ್ದ ದೋಷಾರೋಪಣೆ ನೊಟೀಸನ್ನು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ....
ಇಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್
ಇಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಂಸದರು ಸಲ್ಲಿಸಿದ್ದ ದೋಷಾರೋಪಣೆ ನೊಟೀಸನ್ನು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಯನ್ನು ಇಬ್ಬರು ಕಾಂಗ್ರೆಸ್ ಸಂಸದರು ಮಂಗಳವಾರ ಹಿಂತೆಗೆದುಕೊಂಡಿದ್ದಾರೆ.

ಇಂದು ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಅರ್ಜಿಯನ್ನು ಇಬ್ಬರು ಸಂಸದರು ಹಿಂತೆಗೆದುಕೊಂಡಿದ್ದಾರೆಂದು ಘೋಷಿಸಿ ತಿರಸ್ಕರಿಸಿತು.

ಈ ಅರ್ಜಿಯನ್ನು ಕಾಂಗ್ರೆಸ್ ನ ಇಬ್ಬರು ರಾಜ್ಯಸಭಾ ಸದಸ್ಯರಾದ ಪಂಜಾಬ್ ನ ಪ್ರತಾಪ್ ಸಿಂಗ್ ಬಾಜ್ವಾ ಮತ್ತು ಗುಜರಾತ್ ನ ಅಮೀ ಅಮೀ ಹರ್ಷದಾರೇ ಯಜ್ನಿಕ್ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದೋಷಾರೋಪಣೆ ನಿಲುವಳಿ ಸೂಚನೆ ಮಂಡನೆ ನಿರ್ಧಾರವನ್ನು ರಾಜ್ಯಸಭಾಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಕಳೆದ ಜನವರಿ 12ರಂದು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ನಲ್ಲಿ ಕೇಸುಗಳ ವಿಚಾರಣೆ ವಿಲೇವಾರಿಯಲ್ಲಿ ಲೋಪದೋಷವಿದೆ ಮತ್ತು ಹುದ್ದೆಗಳ ನೀಡಿಕೆಯಲ್ಲಿ ಅಸಮರ್ಪಕತೆಯಿದೆ ಎಂದು ತಮ್ಮ ಅಸಮಾಧಾನ ತೋಡಿಕೊಂಡಿದ್ದ ನಾಲ್ವರು ಹಿರಿಯ ನ್ಯಾಯಾಧೀಶರು ಈ ಅರ್ಜಿ ವಿಚಾರಣೆಯ ನ್ಯಾಯಪೀಠದಲ್ಲಿರಲಿಲ್ಲ.

ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ, ರಂಜನ್ ಗೊಗೊಯ್, ಎಂ.ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್ ಸಂಸದರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಕೀಲ ಕಪಿಲ್ ಸಿಬಲ್, ಈ ಕೇಸಿನ ವಿಚಾರಣೆ ನಡೆಸಲು ನ್ಯಾಯಪೀಠವನ್ನು ಯಾರು ರಚಿಸಿದರೆಂದು ಅರ್ಜಿದಾರರು ತಿಳಿದುಕೊಳ್ಳಲು ಬಯಸುತ್ತಾರೆ ಎಂದರು.

ಆಡಳಿತಾತ್ಮಕ ಆದೇಶದ ಮೂಲಕ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಮುಂದೆ ಪಟ್ಟಿ ಮಾಡಲಾಗಿರುವ ವಿಷಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಆದೇಶ ನೀಡುವ ಅಧಿಕಾರ ಹೊಂದಿರುವುದಿಲ್ಲ. ಇಂತಹ ನ್ಯಾಯಪೀಠ ರಚನೆಯ ಆದೇಶದ ಪ್ರತಿ ನಮಗೆ ಬೇಕಾಗಿದೆ ಎಂದು ಕಪಿಲ್ ಸಿಬಲ್ ಹೇಳಿದರು.

ಇದಕ್ಕೆ ನ್ಯಾಯಪೀಠ, ಮುಖ್ಯ ನ್ಯಾಯಮೂರ್ತಿಗಳು ಹೊರಡಿಸಿರುವ ಆಡಳಿತಾತ್ಮಕ ಆದೇಶದ ಪ್ರತಿ ನೀಡುವುದರಿಂದ ಯಾವ ಉದ್ದೇಶ ಈಡೇರುತ್ತದೆ ಎಂದು ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿತು.

ಆದೇಶದ ಪ್ರತಿ ಸಿಕ್ಕಿದ ನಂತರ ಅರ್ಜಿಯನ್ನು ಮುಂದುವರಿಸಬೇಕೆ ಅಥವಾ ಹಿಂತೆಗೆದುಕೊಳ್ಳಬೇಕೆ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಕಪಿಲ್ ಸಿಬಲ್ ಹೇಳಿದಾಗ, ಸುಪ್ರೀಂ ಕೋರ್ಟ್ ಇದಕ್ಕೆ ನಿರಾಕರಿಸಿದಾಗ ಅರ್ಜಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರು. ಆಡಳಿತಾತ್ಮಕ ಆದೇಶದಲ್ಲಿ ಅಷ್ಟು ರಹಸ್ಯವೇನಿದೆ ಎಂದು ಕೇಳಿದ್ದಕ್ಕೆ ನ್ಯಾಯಪೀಠ ಉತ್ತರಿಸಲು ನಿರಾಕರಿಸಿತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com