ಕಪ್ಪು ಹಣ ಚಾರ್ಜ್ ಶೀಟ್ ಆಧಾರ ರಹಿತ ಆರೋಪ: ಚಿದಂಬರಂ ಕುಟುಂಬ

ಕಪ್ಪು ಹಣ ತಡೆ ಕಾಯ್ದೆ ಅಡಿ ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿರುವುದು....
ಪಿ ಚಿದಂಬರಂ
ಪಿ ಚಿದಂಬರಂ
ಚೆನ್ನೈ: ಕಪ್ಪು ಹಣ ತಡೆ ಕಾಯ್ದೆ ಅಡಿ ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿರುವುದು ಆಧಾರ ರಹಿತ ಆರೋಪ. ಐಟಿ ರಿಟರ್ನ್ಸ್ ವೇಳೆ ನಮ್ಮ ಎಲ್ಲಾ ವಿದೇಶಿ ಹೂಡಿಕೆಯನ್ನು ಘೋಸಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಕುಟುಂಬ ಶನಿವಾರ ಹೇಳಿದೆ.
ನಿನ್ನೆಯಷ್ಟೇ ಐಟಿ ಇಲಾಖೆ ಚಿದಂಬರಂ, ಅವರ ಪತ್ನಿ ನಳನಿ, ಪುತ್ರ ಕಾರ್ತಿ ಹಾಗೂ ಸೊಸೆ ಶ್ರೀನಿಧಿ ಅವರ ವಿರುದ್ಧ ಚೆನ್ನೈ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿತ್ತು.
ಐಟಿ ರಿಟರ್ನ್ಸ್ ವೇಳೆ ನಮ್ಮ ಎಲ್ಲಾ ವಿದೇಶಿ ಹೂಡಿಕೆಯನ್ನು ಘೋಷಿಸಿಕೊಂಡಿದ್ದೇವೆ. ನಮ್ಮ ವಿರುದ್ಧದ ಆರೋಪಗಳು ಸಂಪೂರ್ಣ ಆಧಾರ ರಹಿತ ಎಂದು ಚಿದಂಬರಂ ಕುಟುಂಬ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿದೇಶಿ ಆಸ್ತಿ ವಿವರ ಬಹಿರಂಗಪಡಿಸಿದ ಆರೋಪದ ಮೇಲೆ ಚಿದಂಬರಂ ಹಾಗೂ ಅವರ ಸಂಬಂಧಿಗಳ ವಿರುದ್ಧ ಕಪ್ಪು ಹಣ ಕಾಯ್ದೆ ಅಡಿ ನಾಲ್ಕು ಚಾರ್ಜ್ ಶೀಟ್ ಗಳನ್ನು ಐಟಿ ಅಧಿಕಾರಿಗಳು ಶನಿವಾರ ಚೆನ್ನೈ ವಿಶೇಷ ಕೋರ್ಟ್ ಸಲ್ಲಿಸಿದ್ದರು.
ಇಂಗ್ಲೆಂಡ್ ನ ಕೇಬ್ರಿಡ್ಜ್ ನಲ್ಲಿರುವ ಸುಮಾರು 5.37 ಕೋಟಿ ರುಪಾಯಿ ಮೌಲ್ಯದ ಸ್ಥಿರಾಸ್ತಿ, 80 ಲಕ್ಷ ರುಪಾಯಿ ಮೌಲ್ಯದ ಮತ್ತೊಂದು ಆಸ್ತಿ ಹಾಗೂ ಅಮೆರಿಕದಲ್ಲಿರುವ 3.28 ಕೋಟಿ ರುಪಾಯಿ ಮೌಲ್ಯದ ಆಸ್ತಿಯ ಭಾಗಶಃ ಅಥವಾ ಪೂರ್ಣ ವಿವರ ನೀಡದ ಆರೋಪದ ಮೇಲೆ ಚಿದಂಬರಂ, ನಳನಿ, ಕಾರ್ತಿ ಹಾಗೂ ಶ್ರೀನಿಧಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿದಂಬರಂ ಅವರು ವಿದೇಶದಲ್ಲಿರುವ ಈ ಆಸ್ತಿಗಳ ವಿವರವನ್ನು ತೆರಿಗೆ ಅಧಿಕಾರಿಗಳಿಗೆ ನೀಡದೆ ಕಪ್ಪು ಹಣ ತಡೆ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ವಿದೇಶದಲ್ಲಿ ರಹಸ್ಯವಾಗಿ ಅಕ್ರಮ ಸಂಪತ್ತು ಕೂಡಿಟ್ಟಿರುವ ಭಾರತೀಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಕಪ್ಪು ಹಣದ ವಿರುದ್ಧ ಕಾನೂನು ಅಭಿಯಾನವನ್ನು ಕೈಗೊಳ್ಳಲು ಈ ಕಾಯಿದೆ ಜಾರಿಗೆ ತಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com