
ನವದೆಹಲಿ: ಹೆಚ್ಚುವರಿ ಶುಲ್ಕಗಳನ್ನು ವಿಧಿಸಿದ ನಗರದ 575 ಖಾಸಗಿ ಶಾಲೆಗಳಿಗೆ ಬಡ್ಡಿ ಸಹಿತ ಹೆಚ್ಚುವರಿ ಶುಲ್ಕವನ್ನು ಮಕ್ಕಳ ಪೋಷಕರಿಗೆ ಹಿಂತಿರುಗಿಸುವಂತೆ ದೆಹಲಿ ಸರ್ಕಾರ ಆದೇಶ ನೀಡಿದೆ.
2016ರ ಜೂನ್ ತಿಂಗಳಿನಿಂದ 2018ನೇ ಇಸವಿ ಜನವರಿಯವರೆಗೆ ಹೆಚ್ಚುವರಿ ಶುಲ್ಕ ವಿಧಿಸಿದ ಶಾಲೆಗಳಿಗೆ ಶೇಕಡಾ 9ರಷ್ಟು ಬಡ್ಡಿದರದೊಂದಿಗೆ ಹಿಂತಿರುಗಿಸುವಂತೆ ಆದೇಶ ನೀಡಿದೆ. ಹೆಚ್ಚುವರಿ ಶುಲ್ಕ ಹಿಂತಿರುಗಿಸಲು 7 ದಿನಗಳ ಸಮಯಾವಕಾಶ ನೀಡಿದೆ.
ದೆಹಲಿಯ ಖಾಸಗಿ ಶಾಲೆಗಳು ಆರನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಪರೀಕ್ಷಿಸಲು ದೆಹಲಿ ಹೈಕೋರ್ಟ್ ರಚಿಸಿರುವ ಸಮಿತಿ ಸಲ್ಲಿಸಿದ ವರದಿಯ ಪ್ರಕಾರ ದೆಹಲಿ ಸರ್ಕಾರ ಈ ಆದೇಶ ನೀಡಿದೆ. ಸಮಿತಿ ಇದುವರೆಗೆ ದೆಹಲಿಯ 1169 ಶಾಲೆಗಳ ಅಧ್ಯಯನ ನಡೆಸಿದೆ.
ಏಳು ದಿನಗಳ ಸಮಯಾವಕಾಶವನ್ನು ನೀಡಿರುವ ಸರ್ಕಾರ ಶಿಕ್ಷಕರಿಗೆ ವೇತನ ನೀಡಲು ಬಾಕಿಯಿದ್ದರೆ ಅದನ್ನು ಕೂಡ ಬಿಡುಗಡೆ ಮಾಡಬೇಕೆಂದು ಶಿಕ್ಷಣ ನಿರ್ದೇಶನಾಲಯದ ಆದೇಶ ತಿಳಿಸಿದೆ.
ಆದೇಶವನ್ನು ಪಾಲಿಸದಿರುವ ಖಾಸಗಿ ಶಾಲೆಗಳ ವಿರುದ್ಧ ದೆಹಲಿ ಶಾಲಾ ಶಿಕ್ಷಣ ಕಾಯ್ದೆ 1973ರಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದೆ.
Advertisement