
ಶಾಂತಿನಿಕೇತನ್ :ಬಾಂಗ್ಲಾದೇಶದ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ಪರ ನಿಂತಿರುವ ಭಾರತವನ್ನು ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ಪ್ರಶಂಸಿದ್ದಾರೆ. ಸ್ನೇಹಪರ ರೀತಿಯಲ್ಲಿ ಮಾತುಕತೆಗಳು ದ್ವಿಪಕ್ಷೀಯ ಸಮಸ್ಯೆಗಳ ನಿರ್ಣಯಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.
1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ವೇಳೆ ತನ್ನ ಪರ ಭಾರತ ಹೇಗೆ ನಿಂತಿತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲಾ ಎಂದಿರುವ ಅವರು, ಈ ಹಿಂದೆ ಗಡಿ ಪ್ರದೇಶ ಒಪ್ಪಂದದ ಮೂಲಕ ಗಡಿ ವಿವಾದಗಳನ್ನು ಉಭಯ ದೇಶಗಳು ಬಗೆಹರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸ್ನೇಹಪರ ರೀತಿಯಲ್ಲಿ ಹಲವು ದ್ವಿಪಕ್ಷೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ಕೆಲ ವಿಷಯಗಳ ಬಗ್ಗೆ ಗಮನ ಹರಿಸಬೇಕಾದ್ದರೂ ಈ ಕಾರ್ಯಕ್ರಮದಲ್ಲಿ ಅವುಗಳನ್ನು ಪ್ರಸ್ತಾಪಿಸಲು ಬಯಸುವುದಿಲ್ಲ ಎಂದು ಹಸೀನಾ ಹೇಳಿದ್ದಾರೆ.
ವಿಶ್ವ ಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗಿರುವ ಬಾಂಗ್ಲಾದೇಶ ಭವನ ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಕುರುಹು ಆಗಿದ್ದು, ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ತನ್ನ ಬೆನ್ನೆಲುಬು ಆಗಿ ನಿಂತಿರುವ ಭಾರತವನ್ನು ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಬಡತನ ಬಾಂಗ್ಲಾದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು, ಅದರ ನಿವಾರಣೆಗಾಗಿ ಶ್ರಮಪಡಲಾಗುತ್ತಿದೆ. 2041 ರೊಳಗೆ ಬಾಂಗ್ಲಾದೇಶವನ್ನು ಸುವರ್ಣ ಬಾಂಗ್ಲಾದೇಶವನ್ನಾಗಿ ಅಭಿವೃದ್ದಿ ಪಡಿಸುವ ಗುರಿ ಹೊಂದಿರುವುದಾಗಿ ಹಸೀನಾ ತಿಳಿಸಿದರು.
ಭಾರತ ಮತ್ತು ಬಾಂಗ್ಲಾದೇಶಗಳೆರಡಕ್ಕೂ ರಾಷ್ಟ್ರಗೀತೆ ರಚಿಸಿರುವ ವಿಶ್ವ ಕವಿ ರವೀಂದ್ರ ನಾಥ ಠಾಗೋರ್, ಉಭಯ ದೇಶಗಳಿಗೂ ಸೇರಿದವರಾಗಿದ್ದಾರೆ. ಬಾಂಗ್ಲಾದೇಶದಲ್ಲಿಯೂ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಅದಕ್ಕಾಗಿಯೇ ನಾವು ಅವರ ಮೇಲೆ ಹೆಚ್ಚಿನ ಹಕ್ಕನ್ನು ಹೊಂದುತ್ತೇವೆ ಎಂದರು.
Advertisement