ಲಂಡನ್: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಅಮಾಯಕ ಜೀವಗಳು ಬಲಿಯಾಗಿದ್ದು, ವೇದಾಂತ ಕಂಪೆನಿಯನ್ನು ಲಂಡನ್ ಷೇರು ಮಾರುಕಟ್ಟೆಯಿಂದ ತೆಗೆದು ಹಾಕಬೇಕು(ಡೀಲಿಸ್ಟ್) ಎಂದು ಬ್ರಿಟನ್ ನ ಪ್ರತಿಪಕ್ಷ ಲೇಬರ್ ಪಾರ್ಟಿ ಒತ್ತಾಯಿಸಿದೆ.
ಕಳೆದ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಈ ಪುಂಡು ಕಂಪೆನಿಯಿಂದ(ವೇದಾಂತ) ಲಂಡನ್ ಹಣಕಾಸು ಮಾರುಕಟ್ಟೆಯ ಪ್ರತಿಷ್ಠೆಗೆ ಆಗುವ ಹಾನಿಯನ್ನು ತಡೆಯಲು ಅದನ್ನು ಷೇರು ಮಾರುಕಟ್ಟೆಯ ವಹಿವಾಟು ಪಟ್ಟಿಯಿಂದ ಕಿತ್ತು ಹಾಕುವುದೇ ಉತ್ತಮ ಎಂದು ಬ್ರಿಟನ್ ನ ಛಾಯಾ ಚಾನ್ಸ್ ಲರ್ ಜಾನ್ ಮೆಕ್ ಡೊನೆಲ್ ಅವರು ಹೇಳಿದ್ದಾರೆ.
ಈ ವಾರ ನಡೆದ ಪ್ರತಿಭಟನಾಕಾರರ ಹತ್ಯಾಕಾಂಡದ ನಂತರ ನಿಯಂತ್ರಕರು ಕಂಪನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವೇದಾಂತ ಅನ್ನು ಈ ಕೂಡಲೇ ಡೀಲಿಸ್ಟ್ ಮಾಡಬೇಕು. ಈ ಮೂಲಕ ಷೇರು ಮಾರುಕಟ್ಟೆ ಆಡಳಿತದ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಜಾನ್ ಆಗ್ರಹಿಸಿದ್ದಾರೆ.
ಕಳೆದ ಮಂಗಳವಾರ ತುತುಕುಡಿಯ ವೇದಾಂತ ಕಂಪನಿಯ ಸ್ಟರ್ಲೈಟ್ ವಿರುದ್ಧ ನಡೆದಿದ್ದ ಹಿಂಸಾಚಾರದಲ್ಲಿ 13 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.