ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಪ ಚುನಾವಣೆ; ಇವಿಎಂ ದೋಷ ದೊಡ್ಡದಾಗಿ ಬಿಂಬಿಸಲಾಗುತ್ತಿದೆ: ಚುನಾವಣಾ ಆಯೋಗ

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ವೇಳೆ...
Published on
ನವದೆಹಲಿ: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ವೇಳೆ ಇವಿಎಂಗಳಲ್ಲಿನ ಸಣ್ಣ ಪುಟ್ಟ ದೋಷವನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಹಲವು ಮತಗಟ್ಟೆಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಗಳಲ್ಲಿ ದೋಷ ಕಂಡುಬಂದಿದ್ದು, ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸ್ಪಷ್ಟನೆ ನೀಡಿದ್ದು, ಮತಯಂತ್ರಗಳಲ್ಲಿ ದೋಷ ಕಂಡುಬರುವುದು ಸಾಮಾನ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ಆಯೋಗ ಪ್ರತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹಾಗೂ ಉಪ ಚುನಾವಣೆಗೆ ಅಗತ್ಯವಿರುವ ಹೆಚ್ಚುವರಿ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಒದಗಿಸಿದೆ ಎಂದು ಆಯೋಗ ಹೇಳಿದೆ.
ಕ್ಷೇತ್ರ ಚುನಾವಣಾ ಅಧಿಕಾರಿಗಳ ಬಳಿ ಸಾಕಷ್ಟು ಸಂಖ್ಯೆಯ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಕಾಯ್ದಿರಸಲಾಗಿದ್ದು, ದೋಷವಿರುವ ಯಂತ್ರಗಳನ್ನು ಕೂಡಲೇ ಬದಲಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ಮತಗಟ್ಟೆಗಳ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಅದನ್ನು ತಕ್ಷಣ ಸರಿಪಡಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಆಯೋಗ ಹೇಳಿದೆ.
ಉತ್ತರ ಪ್ರದೇಶದ  ಕೈರಾನಾದ ಐದು ವಿಧಾನಸಭಾ ಕ್ಷೇತ್ರದ  ಐದು ಮತಗಟ್ಟೆಯಲ್ಲಿ  ಇವಿಎಂ ದೋಷ ಕಂಡುಬಂದಿದ್ದು, ಎಲ್ಲಾ ಕಡೆಗಳಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ. ಬಿಜೆಪಿ ಗೆಲ್ಲುವ ಉದ್ದೇಶದಿಂದ ಮುಸ್ಲಿಂ ಹಾಗೂ ದಲಿತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ದೋಷವಿರುವ ಮತಗಳನ್ನು ಬದಲಾಯಿಸುತ್ತಿಲ್ಲ ಎಂದು ಆರೋಪಿಸಿ ಕೈರಾನಾ  ಕ್ಷೇತ್ರದ ಆರ್ ಎಲ್ ಡಿ ಅಭ್ಯರ್ಥಿ ತಬ್ ಸಮ್  ಹಸನ್ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇನ್ನು ನೂರ್ ಪುರದಲ್ಲಿ 140 ಇವಿಎಂಗಳು ದೋಷ ಹೊಂದಿರುವ ಬಗ್ಗೆ ಮಾಹಿತಿ ಇದೆ. ಅವುಗಳನ್ನು ತಿರುಚಲಾಗಿದೆ. ಫಲ್ಪುರ್ ಮತ್ತು ಗೋರಖ್ ಪುರ ಉಪಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ ಈ ರೀತಿಯಲ್ಲಿ ಮತಯಂತ್ರಗಳನ್ನು ತಿರುಚಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ರಾಜೇಂದ್ರ ಚೌದರಿ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com