
ನವದೆಹಲಿ: ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ -ಇ- ತೊಯ್ಬಾ ಸಂಘಟನೆ ಸ್ಥಾಪಕ ಹಪೀಜ್ ಸಯೀದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲ್ಹಾವುದ್ದೀನ್ ವಿರುದ್ಧ ವಿಶೇಷ ಎನ್ ಐಎ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.
ಜಮ್ಮು-ಕಾಶ್ಮೀರ ಕಣಿವೆ ಮತ್ತಿತರ ಪ್ರದೇಶದಲ್ಲಿ ಶಾಂತಿ ಕದಡಲು ಉಗ್ರ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಇವರ ಮೇಲೆ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕೆಂದು ರಾಷ್ಟ್ರೀಯ ತನಿಖಾ ದಳ-ಎನ್ ಐಎ , ವಿಶೇಷ ಎನ್ ಐಎ ನ್ಯಾಯಾಲಯವನ್ನು ಕೋರಲಾಗಿತ್ತು ಎಂದು ಎನ್ ಐಎ ವಕ್ತಾರರು ತಿಳಿಸಿದ್ದಾರೆ.
ಈ ಇಬ್ಬರು ಪಾಕಿಸ್ತಾನದ ಉಗ್ರರಿಗೆ ತರಬೇತಿ ನೀಡುವ ಮೂಲಕ ಭಾರತದ ಒಳಗಡೆ ನುಸುಳಿಸುತ್ತಿದ್ದರು. ಅಲ್ಲದೇ, ಪ್ರತ್ಯೇಕತವಾದಿಗಳನ್ನು ಮನವೊಲಿಸಿ ಭಾರತದ ವಿರುದ್ಧ ಯುದ್ದಕ್ಕೆ ಪ್ರಚೋದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಹಫೀಜ್ ಸಯೀದ್, ಸೈಯದ್ ಸಲ್ಹಾವುದ್ದೀನ್ ಸೇರಿದಂತೆ 12 ಆರೋಪಿಗಳ ವಿರುದ್ಧ ಜನವರಿ 18 ರಂದೇ ಎನ್ ಐಎ ಚಾರ್ಜ್ ಶೀಟ್ ದಾಖಲಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಭಾರತದ ವಿರುದ್ಧ ಯುದ್ದಕ್ಕೆ ಪಿತೂರಿ ಚಟುವಟಿಕೆ ಆರೋಪದ ಮೇರೆಗೆ ಇಬ್ಬರ ವಿರುದ್ಧ 12, 794 ಪುಟಗಳ ಜಾರ್ಜ್ ಶೀಟ್ ದಾಖಲಿಸಲಾಗಿದೆ.
ಈ ಸಂಬಂಧ ಮೇ 30, 2017ರಲ್ಲಿಯೇ ಕೇಸ್ ಗೆ ದಾಖಲಿಸಲಾಗಿದ್ದು, ಕಳೆದ ವರ್ಷ ಜುಲೈ 24 ರಂದು ಮೊದಲ ಬಾರಿಗೆ ಬಂಧಿಸಲಾಗಿತ್ತು. ವಿಚಾರಣೆಗಾಗಿ ಜಮ್ಮ- ಕಾಶ್ಮೀರ ಸೇರಿದಂತೆ 60 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ 950 ದಾಖಲೆಗಳು ಹಾಗೂ 600 ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ, 300 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
Advertisement