ಕರ್ನೂಲ್: ಕಾಮುಕ ಶಿಕ್ಷಕನೊಬ್ಬ ತನ್ನ ಲೈಂಗಿಕಾಸಕ್ತಿಯನ್ನು ತಿರಸ್ಕರಿಸಿದ 9 ವರ್ಷದ ಬಾಲಕಿಯ ಕತ್ತು ಸೀಳಿದ ಅಮಾನುಷ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಕಾಮುಕ ಶಿಕ್ಷಕನನ್ನು ಶಂಕರ್ ಎಂದು ಗುರುತಿಸಲಾಗಿದ್ದು, ಕರ್ನೂಲ್ ಜಿಲ್ಲೆಯ ಬಂಗಾರುಪೇಟ್ ದಲ್ಲಿರುವ ರಾಕ್ ವೆಲ್ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶನಿವಾರ ಬೆಳಗ್ಗೆ ದರೋಡೆಕೋರನಂತೆ ಬಾಲಕಿಯ ಮನೆಗೆ ನುಗ್ಗಿದ ಶಿಕ್ಷಕ ಬ್ಲೇಡ್ ನಿಂದ ಆಕೆಯ ಕತ್ತು ಸೀಳಿದ್ದಾನೆ.
ಬಾಲಕಿಯ ಕಿರುಚಾಟ ಕೇಳಿ ಕೂಡಲೇ ಆಗಮಿಸಿದ ಸ್ಥಳೀಯ ನಿವಾಸಿಗಳು ಆಕೆಯನ್ನು ಕರ್ನೂಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಶಿಕ್ಷಕನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಗೊಂಡ ಆರೋಪಿಯನ್ನು ಸಹ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಶಿಕ್ಷಕ ಶಂಕರ್ ನನ್ನು ಅಮಾನತುಗೊಳಿಸಿದೆ.