20 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಎಂಎನ್ಎಂ ಸಿದ್ಧ: ಕಮಲ ಹಾಸನ್‌

ಮುಂಬರುವ 20 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಕ್ಕಳ ನೀಧಿ ಮಯ್ಯಂ(ಎಂಎನ್ಎಂ) ಸ್ಪರ್ಧಿಸಲಿದೆ ಎಂದು ದಕ್ಷಿಣ ಭಾರತದ....
ಕಮಲ್ ಹಾಸನ್
ಕಮಲ್ ಹಾಸನ್
ಚೆನ್ನೈ: ಮುಂಬರುವ 20 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಕ್ಕಳ ನೀಧಿ ಮಯ್ಯಂ(ಎಂಎನ್ಎಂ) ಸ್ಪರ್ಧಿಸಲಿದೆ ಎಂದು ದಕ್ಷಿಣ ಭಾರತದ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಬುಧವಾರ ಘೋಷಿಸಿದ್ದಾರೆ.
ಎಂಎನ್ ಎಂ ಸಂಸ್ಥಾಪಕ ಕಮಲ್ ಹಾಸನ್ ಅವರು ಇಂದು ಪಕ್ಷದ ಕಚೇರಿಯಲ್ಲಿ ನೂರಾರು ಕಾರ್ಯಕರ್ತರೊಂದಿಗೆ ತಮ್ಮ 64ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಉಪ ಚುನಾವಣೆ ನಡೆಯುವ ಎಲ್ಲ 20 ಕ್ಷೇತ್ರದಲ್ಲಿ ತಮ್ಮ ಎಂಎನ್ ಎಂ ಸ್ಪರ್ಧಿಸುತ್ತದೆ ಎಂದರು.
ಉಪ ಚುನಾವಣೆ ನಡೆಯಲಿರುವ ಈ ಕ್ಷೇತ್ರಗಳಲ್ಲಿ ಶೇ. 80ರಷ್ಟು ಪದಾಧಿಕಾರಿಗಳ ನೇಮಕ ಆಗಿದೆ. ನಮ್ಮದು ಜನರ ಪಕ್ಷವಾಗಿದೆ ಎಂದರು. 
ಭ್ರಷ್ಟಾಚಾರ ಎಂಬುದು ಸಂಪೂರ್ಣ ನಿರ್ಮೂಲನೆಯಾದರೆ ಆಡಳಿತ ಪಾರದರ್ಶಕವಾಗಿರುತ್ತದೆ. ಈ ಬಗ್ಗೆ ಎಲ್ಲ ಪಕ್ಷಗಳು ಚಿಂತನೆ ನಡೆಸಬೇಕು ಎಂದು ಕಮಲ್ ಹೇಳಿದರು.
ಇದೇ ವೇಳೆ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಬಹುಭಾಷಾ ನಟ, ನಮ್ಮ ದೇಶದಲ್ಲಿಯೇ ಹಲವಾರು ಸಮಸ್ಯೆಗಳಿವೆ. ಅದನ್ನು ಪರಿಹರಿಸಿಕೊಳ್ಳೋಣ. ಬೇರೆ ದೇಶದ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ತಮಿಳುನಾಡು ವಿಧಾನಸಭೆಯ ಸ್ಪೀಕರ್ ಆಡಳಿತರೂಢ ಎಐಎಡಿಎಂಕೆಯ 18 ಶಾಸಕರನ್ನು ಅನರ್ಹಗೊಳಿಸಿದ್ದು, ಅದನ್ನು ಹೈಕೋರ್ಟ್ ಸಹ ಎತ್ತಿ ಹಿಡಿದಿದೆ. ಹೀಗಾಗಿ ಆ 18 ಕ್ಷೇತ್ರಗಳು ಮತ್ತು ಇಬ್ಬರು ಶಾಸಕರ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಚುನಾವಣೆ ಆಯೋಗ ಶೀಘ್ರವೇ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com