ಅನಾನ್ಯೀಕರಣದಿಂದ ಕ್ರಮಬದ್ಧ ಆರ್ಥಿಕತೆಯ ಸ್ಥಾಪನೆ, ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಸಾಧ್ಯವಾಯಿತು: ಅರುಣ್ ಜೈಟ್ಲಿ

ಅನಾನ್ಯೀಕರಣದಿಂದ ಕ್ರಮಬದ್ಧ ಆರ್ಥಿಕತೆಯ ಸ್ಥಾಪನೆ, ತೆರಿಗೆ ಸಂಗ್ರಹದಲ್ಲಿ ಹೆಚ್ಚಳದಿಂದ ಬಡ ಜನತೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುಕೂಲವಾಗಿದೆ....
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಅನಾನ್ಯೀಕರಣದಿಂದ ಕ್ರಮಬದ್ಧ ಆರ್ಥಿಕತೆಯ ಸ್ಥಾಪನೆ, ತೆರಿಗೆ ಸಂಗ್ರಹದಲ್ಲಿ ಹೆಚ್ಚಳದಿಂದ ಬಡ ಜನತೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುಕೂಲವಾಗಿದೆ ಎಂದು ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ದೇಶದ ಆರ್ಥಿಕ ವಿಚಾರದಲ್ಲಿ ಜಾರಿಗೆ ತಂದ ಅನಾಣ್ಯೀಕರಣಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಎನ್ ಡಿಎ ಸರ್ಕಾರದ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಿದವರ ಸಂಖ್ಯೆ 2014ರಲ್ಲಿ ಇದ್ದ 3.8 ಕೋಟಿ ರೂಪಾಯಿಗಳಿಂದ 6.86 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದಿದ್ದಾರೆ.
ಎನ್ ಡಿಎ ಸರ್ಕಾರದ 5 ವರ್ಷಗಳ ಆಡಳಿತ ಕೊನೆಗೊಳ್ಳುವ ಹೊತ್ತಿಗೆ ತೆರಿಗೆ ವಿವರ ಸಲ್ಲಿಸುವವರ ಸಂಖ್ಯೆ ದ್ವಿಗುಣವಾಗುತ್ತದೆ ಎಂದು ಜೇಟ್ಲಿ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಅನಾಣ್ಯೀಕರಣದ ಪರಿಣಾಮಗಳಡಿಯಲ್ಲಿ ಬರೆದಿದ್ದಾರೆ.
2 ವರ್ಷಗಳ ಹಿಂದೆ 500 ಮತ್ತು ಸಾವಿರ ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ್ದರಿಂದ ದೇಶದ ಆರ್ಥಿಕತೆ ಹೆಚ್ಚು ಶಿಸ್ತುಬದ್ಧವಾಗಿ ಒಂದು ರೂಪ ಪಡೆದುಕೊಂಡಿತು. ಹೆಚ್ಚು ಆದಾಯ, ಬಡಜನರಿಗೆ ಹೆಚ್ಚು ಸಂಪನ್ಮೂಲ, ಉತ್ತಮ ಮೂಲಭೂತಸೌಕರ್ಯ ಮತ್ತು ನಾಗರಿಕರ ಜೀವನ ಮಟ್ಟ ಕೂಡ ಸುಧಾರಿಸಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ತೆರಿಗೆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗಿದೆ ಮತ್ತು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಅನುಪಾತದ ಪರೋಕ್ಷ ತೆರಿಗೆ 2014-15ರಲ್ಲಿದ್ದ ಶೇಕಡಾ 4.4ರಿಂದ ಶೇಕಡಾ 5.4ಕ್ಕೆ ಏರಿಕೆಯಾಗಿದೆ ಎಂದರು.
ಅನಾಣ್ಯೀಕರಣದ ನಂತರ ಇಡೀ ನಗದು ಬ್ಯಾಂಕಿನಲ್ಲಿ ಠೇವಣಿಯಿಡಲಾಗಿದೆ ಎಂಬ ಟೀಕೆಗಳಿಗೆ ಉತ್ತರಿಸಿರುವ ಜೇಟ್ಲಿ, ಕರೆನ್ಸಿಗಳನ್ನು ಮುಟ್ಟುಗೋಲು ಹಾಕುವುದು ಅನಾಣ್ಯೀಕರಣದ ಉದ್ದೇಶವಾಗಿರಲಿಲ್ಲ. ದೇಶದ ಆರ್ಥಿಕತೆಗೆ ಸ್ಪಷ್ಟ ರೂಪ ಕೊಟ್ಟು ವಿಸ್ತಾರವಾದ ಉದ್ದೇಶದಿಂದ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚು ಮಾಡುವುದು ಅದರ ಉದ್ದೇಶವಾಗಿತ್ತು. ನಗದಿನಿಂದ ಡಿಜಿಟಲ್ ವ್ಯವಹಾರಕ್ಕೆ ಭಾರತದ ಆರ್ಥಿಕ ವ್ಯವಸ್ಥೆಯನ್ನು ಕೊಂಡೊಯ್ಯುವುದು ಕೂಡ ಇದರ ಹಿಂದಿನ ಉದ್ದೇಶವಾಗಿತ್ತು. ಅಧಿಕ ತೆರಿಗೆ ಸಂಗ್ರಹ ಮತ್ತು ಅಧಿಕ ತೆರಿಗೆ ಮೂಲ ಕೂಡ ಸಹಜ ಉದ್ದೇಶವಾಗಿತ್ತು ಎಂದು ಜೇಟ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ, ಕಪ್ಪು ಹಣ ಸಂಗ್ರಹಣೆಯನ್ನು ತಡೆಯಲು  ನವೆಂಬರ್ 8, 2016ರಲ್ಲಿ 500 ಮತ್ತು 1000 ರೂಪಾಯಿ ಮೌಲ್ಯದ ನೋಟುಗಳ ಚಲಾವಣೆಯನ್ನು ನಿಷೇಧಿಸಿತ್ತು. 500 ಮತ್ತು 1000 ರೂಪಾಯಿಗಳ 15.41 ಲಕ್ಷ ಕೋಟಿ ಮೌಲ್ಯದ ನೋಟುಗಳಲ್ಲಿ ಶೇಕಡಾ 99.3ರಷ್ಟು ಅಥವಾ 15.31 ಲಕ್ಷ ಕೋಟಿ ರೂಪಾಯಿಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ಸಾದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com