ರಾಯಪುರ್: ಛತ್ತೀಸ್ ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯವನ್ನು ನಕ್ಸಲ್ ಮುಕ್ತಗೊಳಿಸುವ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಭರವಸೆ ನೀಡಿದೆ.
ನಕ್ಸಲ್ ಪೀಡಿತ ರಾಜ್ಯದಲ್ಲಿ ನಾಲ್ಕನೆ ಅವಧಿಗೆ ಅವಕಾಶ ಕೇಳುತ್ತಿರುವ ಬಿಜೆಪಿ, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ರಾಜ್ಯವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವ ಭರವಸೆ ನೀಡಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಪಕ್ಷದ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅಮಿತ್ ಶಾ, : ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸರ್ಕಾರ ಬಹುತೇಕ ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದು, ಇಂಧನ ಮತ್ತು ಸಿಮೆಂಟ್ ಉತ್ಪಾದನೆಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದೆ ಎಂದರು.
ಈ ಹಿಂದೆ ರಾಜ್ಯವನ್ನು ಹಿಂದುಳಿದ(ಬಿಮಾರು) ರಾಜ್ಯ ಎಂದು ಆರೋಪಿಸಲಾಗಿತ್ತು. ಆದರೆ ಛತ್ತೀಸ್ ಗಢ್ ಇಂಧನ ಮತ್ತು ಸಿಮೆಂಟ್ ಉತ್ಪಾದನೆಯ ಕೇಂದ್ರವಾಗಿ ಬೆಳೆದಿದೆ ಎಂದರು.