ಸಿಬಿಐ ಆಂತರಿಕ ಕಲಹ: ಅಲೋಕ್ ವರ್ಮಾ ವಿರುದ್ಧ ಸುಪ್ರೀಂಗೆ ವರದಿ ಸಲ್ಲಿಸಿದ ಸಿವಿಸಿ
ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಲಂಚ ಸ್ವೀಕಾರ ಪ್ರಕರಣದ ಸಂಬಂಧ ಕೇಂದ್ರ ಜಾಗೃತ ದಳ (ಸಿವಿಸಿ) ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.
ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಲಂಚ ಸ್ವೀಕಾರ ಪ್ರಕರಣದ ಸಂಬಂಧ ಕೇಂದ್ರ ಜಾಗೃತ ದಳ (ಸಿವಿಸಿ) ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್. ಕೆ. ಕೌಲ್ ಅವರನ್ನೊಳಗೊಂಡ ಪೀಠವು ಸಿವಿಸಿ ದಾಖಲೆಗಳನ್ನು ಪಡೆದುಕೊಂಡಿದ್ದು ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ನಿಗದಿಪಡಿಸಿದೆ.
ಇದೇ ವೇಳೆ ಹಂಗಾಮಿ ಸಿಬಿಐ ನಿರ್ದೇಶಕರಾದ ನಾಗೇಶ್ವರ ರಾವ್ ತೆಗೆದುಕೊಂಡಿರುವ ನಿರ್ಧಾರದ ಕುರಿತ ವರದಿಯನ್ನು ಸಹ ಸಿವಿಸಿ ಕೋರ್ಟ್ ಗೆ ಸಲ್ಲಿಸಿದೆ.
ತನ್ನನ್ನು ಕರ್ತವ್ಯ ಭ್ರಷ್ಟನನ್ನಾಗಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಅಲೋಕ್ ವರ್ಮಾ ಸಲ್ಲಿಸಿದ ಅರ್ಜಿ ವಿಚಾರಣೆ ಸಹ ನವೆಂಬರ್ 16ಕ್ಕೆ ನಡೆಸುವುದಾಗಿ ಕೋರ್ಟ್ ತೀರ್ಮಾನಿಸಿದೆ.
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಹಾಗೂ ಅಲೋಕ್ ವರ್ಮಾ ನಡುವೆ ಸಂಘರ್ಷ ಏರ್ಪಟ್ಟ ಕಾರಣ ಕೇಂದ್ರ ಸರ್ಕಾರ ಅಲೋಕ್ ವರ್ಮಾ ಅವರನ್ನು ಕಳೆದ ತಿಂಗಳು ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿತ್ತು.
ಅಲೋಕ್ ವರ್ಮಾ ಹಾಗೂ ಅಸ್ತಾನಾ ತಾವು ಪರಸ್ಪರ ಭ್ರಷ್ಠಾಚಾರ ಹಾಗೂ ಲಂಚ ಸ್ವೀಕಾರದ ಆರೋಪಗಳನ್ನು ಮಾಡಿಕೊಂಡಿದ್ದು ಸಿಬಿಐ ಆಂತರಿಕ ಕಲಹ ದೇಶದಲ್ಲೆಲ್ಲಾ ಚರ್ಚೆಗೆ ಗ್ರಾಸವಾಗಿತ್ತು.
ಇದೇ ವೇಳೆ ಕೆವಿ ಚೌಧರಿ ನೇತೃತ್ವದ ಸಿವಿಸಿ ಸಮಿತಿ ಮುಂದೆ ಹಾಜರಾಗಿದ್ದ ವರ್ಮಾ, ತಮ್ಮ ವಿರುದ್ಧ ಅಸ್ತಾನಾ ಮಾಡಿದ್ದ ಎಲ್ಲಾ ಆರೋಪಗಳು ಸುಳ್ಳು ಎಂದು ನಿರಾಕರೈಸಿದ್ದರು.