ದೇಶದ ಸಮಸ್ಯೆ ಬಿಟ್ಟು ಕಾಂಗ್ರೆಸ್ ಪರಂಪರೆ ಬಗ್ಗೆ ಮೋದಿಗೇಕೆ ಉಸಾಬರಿ? ಚಿದಂಬರಂ ಆಕ್ರೋಶ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ...
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ:  ಛತ್ತೀಸ್ ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ  ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ನೆಹರು-ಗಾಂಧಿ ಕುಟುಂಬವನ್ನು ಹೊರತುಪಡಿಸಿ ಅದರ ಅಧ್ಯಕ್ಷರ ಹೆಸರುಗಳನ್ನು ಪಟ್ಟಿ ಮಾಡುವ ಮೂಲಕ ಪಕ್ಷದ ಪರಂಪರೆಯನ್ನು ನೆನಪಿಸುವ ಪ್ರಯತ್ನವನ್ನು ಮಾಡಿದರು.

ಅಲ್ಲದೆ ಇನ್ನಾದರೂ ಮೋದಿಯವರು ರಫೆಲ್ ಯುದ್ಧ ವಿಮಾನ ಒಪ್ಪಂದ, ನಿರುದ್ಯೋಗ ಸಮಸ್ಯೆ ಮತ್ತು ರೈತರ ಆತ್ಮಹತ್ಯೆ ವಿಚಾರಗಳ ಬಗ್ಗೆ  ಮಾತನಾಡುವಂತೆ ಹೇಳಿದರು.
ನಿನ್ನೆ ಛತ್ತೀಸ್ ಗಢದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿಯವರು, ನೆಹರೂ ಗಾಂಧಿ ಕುಟುಂಬ ಹೊರತುಪಡಸಿ ಬೇರೊಬ್ಬ ನಾಯಕರು ಐದು ವರ್ಷಗಳವರೆಗೆ ಯಾರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ಕಾಂಗ್ರೆಸ್ ನಾಯಕರೇ ಹೇಳಲಿ ಎಂದು ಸವಾಲು ಹಾಕಿದ್ದರು.

ಈ ಕುರಿತು ಇಂದು ಸರಣಿ ಟ್ವೀಟ್ ಮೂಲಕ ಉತ್ತರಿಸಿರುವ ಚಿದಂಬರಂ, ಸ್ವಾತಂತ್ರ್ಯೋತ್ತರ ಕಾಂಗ್ರೆಸ್ ನಾಯಕರ ಹೆಸರನ್ನು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ರಿಂದ ಹಿಡಿದು ಲಾಲ್ ಬಹದ್ದೂರು ಶಾಸ್ತ್ರಿ, ಕೆ ಕಾಮರಾಜ್ ಮತ್ತು ಮನಮೋಹನ್ ಸಿಂಗ್ ವರೆಗೆ ಸ್ವಾತಂತ್ರ್ಯನಂತರ ನೂರಾರು ನಾಯಕರು ಕಾಂಗ್ರೆಸ್ ನಲ್ಲಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿಯವರ ಸ್ಮರಣೆಗೆ ಎಂದು ಟ್ವೀಟ್ ನಲ್ಲಿ ಆರಂಭಿಸಿದ ಅವರು, 1947ರ ನಂತರ ಆಚಾರ್ಯ ಕೃಪಲಾನಿ, ಪಟ್ಟಾಬಿ ಸೀತಾರಾಮಯ್ಯ, ಪುರುಷೋತ್ತಮದಾಸ್ ಟಂಡನ್, ಯು ಎನ್ ದೇಬರ್, ಸಂಜೀವ ರೆಡ್ಡಿ, ಸಂಜೀವಯ್ಯ, ಕಾಮರಾಜ್, ನಿಜಲಿಂಗಪ್ಪ, ಸಿ ಸುಬ್ರಹ್ಮಣ್ಯ, ಜಗಜೀವನ್ ರಾಮ್, ಶಂಕರ್ ದಯಾಳ್ ಶರ್ಮ, ಡಿ ಕೆ ಬಾರೂಹ್, ಬ್ರಹ್ಮಾನಂದ ರೆಡ್ಡಿ, ಪಿ ವಿ ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ಹೆಸರಿನ ಪಟ್ಟಿ ಮಾಡಿದ್ದಾರೆ.

ಮೋದಿಯವರ ವಿರುದ್ಧ ಮತ್ತೆ ಹರಿಹಾಯ್ದಿರುವ ಅವರು, ಕಾಂಗ್ರೆಸ್ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಬಗ್ಗೆ ಮೋದಿಯವರು ಯಾವಾಗಲೂ ಕುತೂಹಲ ಇರಿಸಿಕೊಂಡಿದ್ದಾರೆ, ಆ ಬಗ್ಗೆ ಮಾತುಕತೆಯಲ್ಲಿ ಅವರು ಬಹುಪಾಲು ಸಮಯ ಕಳೆಯುತ್ತಾರೆ. ಅದರ ಬದಲು ದೇಶದ ಪ್ರಧಾನಿಯಾಗಿ ಅರ್ಧ ಸಮಯವನ್ನಾದರೂ ನೋಟುಗಳ ಅಪನಗದೀಕರಣ, ಜಿಎಸ್ ಟಿ, ರಫೆಲ್ ಯುದ್ಧ ವಿಮಾನ ಒಪ್ಪಂದ, ಸಿಬಿಐ ಮತ್ತು ಆರ್ ಬಿಐ ಬಗ್ಗೆ ಮಾತನಾಡಿದ್ದಾರೆಯೇ? ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆಯೇ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ, ಗೋಹತ್ಯೆ, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಯುತ್ತಿರುತ್ತದೆ, ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿದೆ ಇವುಗಳ ಬಗ್ಗೆ ಮಾತನಾಡುವುದು ಬಿಟ್ಟು ಅನವಶ್ಯಕ ವಿಷಯಗಳ ಬಗ್ಗೆ ಪ್ರಧಾನಿಯವರು ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com