ನವದೆಹಲಿ: ಪಂಜಾಬ್ ನ ಅಮೃತಸರದ ನಿರಂಕಾರಿ ಪಂಥದ ಪ್ರಾರ್ಥನ ಮಂದಿರದ ಮೇಲೆ ನಡೆದ ಗ್ರನೇಡ್ ದಾಳಿಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಬುಧವಾರ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು 26 ವರ್ಷದ ಬಿಕ್ರಮ್‌ಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ದಾಳಿಗೆ ಬಳಸಿದ್ದ ಬೈಕ್ ಅನ್ನು ಸಹ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ನೇರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಈ ದಾಳಿಗೆ ಬಳಕೆಯಾದ ಗ್ರನೇಡ್ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಇದರಲ್ಲಿ ಪಾಕಿಸ್ತಾನ್ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್(ಐಎಸ್‌ಐ) ಕೈವಾಡವಿದೆ. ಪಂಜಾಬ್ ನಲ್ಲಿ ಅರಾಜಕತೆ ಸೃಷ್ಟಿಸಲು ಪಾಕ್ ಮುಂದಾಗಿದೆ. ಇದಕ್ಕೆ ಸ್ಥಳೀಯರನ್ನು ಬಳಸಿಕೊಳ್ಳುತ್ತಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಈ ಮಧ್ಯೆ, ಸ್ಫೋಟದ ಸಂಚು ರೂಪಿಸಿರುವ ಮತ್ತೊಬ್ಬ ಆರೋಪಿ ಅವತಾರ್ ಸಿಂಗ್ ಎಂದು ಗೊತ್ತಾಗಿದ್ದು, ಈತನನ್ನ ಕೂಡಲೇ ಬಂಧಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕಳೆದ ಭಾನುವಾರ ಅಮೃತಸರದ ಹೊರವಲಯದಲ್ಲಿರುವ ನಿರಂಕಾರಿ ಭವನದಲ್ಲಿ ಧಾರ್ಮಿಕ ಸಭೆ ನಡೆಯುತ್ತಿದ್ದ ವೇಳೆ ಉಗ್ರರು ಗ್ರನೇಡ್ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು ಮತ್ತು 20 ಮಂದಿ ಗಾಯಗೊಂಡಿದ್ದರು.