ನಹಾನ್ (ಹಿಮಾಚಲ ಪ್ರದೇಶ): ಅತಿ ವೇಗವಾಗಿ ಚಲಿಸುತ್ತಿದ್ದ ಬಸ್ ಒಂದು ಸೇತುವೆಯಿಂದ ನದಿಗೆ ಉರುಳಿದ ಪರಿಣಾಮ ಕನಿಷ್ಟ ಒಂಬತ್ತು ಮಂದಿ ಸಾವನ್ನಪ್ಪಿ 25 ಜನ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಸಿಮೌರ್ ಜಿಲ್ಲೆಯಲ್ಲಿ ನಡೆದಿದೆ.
ಶಿಮ್ಲಾದಿಂದ ದಕ್ಷಿಣಕ್ಕೆ 168 ಕಿ.ಮೀ. ದೂರದಲ್ಲಿ ಈ ಅವಘಡ ಸಂಭವಿಸಿದ್ದು ರೇಣುಕಾ-ದದಾಹು-ನಹಾನ್ ರಸ್ತೆಯ ಖಾದ್ರಿ ಗ್ರಾಮದ ಸಮೀಪ ಸಂಜೆ 4.30 ಗಂಟೆಗೆ ಬಸ್ ನದಿಗೆ ಉರುಳಿದೆ.
ರೇಣುಕಾಜಿ ನಿಂದ ನಹಾನ್ ಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯ್ಯಂತ್ರಣ ತಪ್ಪಿ ಜಲಾಲ್ ಸೇತುವೆಯಿಂದ 40 ಅಡಿ ಆಳದ ನದಿಗೆ ಬಿದ್ದಿದೆ ಎಂದು ಹೆಚ್ಚುವರಿ ಅಧೀಕ್ಷಕ ವೀರೇಂದ್ರ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಘಟನೆಯಲ್ಲಿ ಮೂರು ಮಹಿಳೆಯರು ಸೇರಿದಂತೆ ನಾಲ್ಕು ಪ್ರಯಾಣಿಕರು ಸ್ಥಳದಲ್ಲೇ ನಿಧನರಾದರೆ ಇನ್ನೂ ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ. ಸತ್ತವರ ಗುರುತು ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು ಹೆಚ್ಚಿನವರು ಸ್ಥಳೀಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.