ಮಕ್ರಾನಾ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕಾಂಗ್ರೆಸ್ ಉಗ್ರರಿಗೆ ಬಿರಿಯಾನಿ ತಿನ್ನಿಸಿದೆ. ನಾವು ಈಗ ಉಗ್ರರಿಗೆ ಗುಂಡೇಟು ತಿನ್ನಿಸುತ್ತಿದ್ದೇವೆ' ಎಂದು ಸೋಮವಾರ ಹೇಳಿದ್ದಾರೆ.
ಇಂದು ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ವಿಭಜನೆಯ ರಾಜಕಾರಣವನ್ನು ಅನುಸರಿಸಿಕೊಂಡು ಬಂದ ಕಾರಣ ದೇಶದಲ್ಲಿ ಭಯೋತ್ಪಾದನೆ ಬೆಳೆದು ಬಂದಿದೆ ಎಂದು ಆರೋಪಿಸಿದರು.
ಬಿರಿಯಾನಿ ತಿಂದು ಬೆಳೆದ ಉಗ್ರರಿಗೆ ನಾವು ಈಗ ಗುಂಡಿನ ರುಚಿ ತೋರಿಸುತ್ತಿರುವುದನ್ನು ನೀವು ನೋಡಿದ್ದೀರಿ. ದೇಶದಲ್ಲಿ ಭಯೋತ್ಪಾದನೆಯ ಹುಟ್ಟು, ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ದೂರಿದರು.
ದೇಶದಲ್ಲಿನ ಭಯೋತ್ಪಾದನೆ, ಪ್ರತ್ಯೇಕತೆ, ನಕ್ಸಲ್‌ವಾದ ಮತ್ತು ಭ್ರಷ್ಟಾಚಾರದಂತಹ ಪಿಡುಗುಗಳಿಗೆ ಜನ್ಮ ನೀಡಿದ್ದೇ ಕಾಂಗ್ರೆಸ್ ಎಂದು ಉತ್ತರ ಪ್ರದೇಶ ಸಿಎಂ ವಾಗ್ದಾಳಿ ನಡೆಸಿದರು.