1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ರದ್ದು, ಬ್ಯಾಗ್ ಭಾರ ಇಳಿಸಿದ ಹೆಚ್ ಆರ್ ಡಿ ಸಚಿವಾಲಯ

1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ರದ್ದುಗೊಳಿಸಿ ಮತ್ತು ಶಾಲಾ ಬ್ಯಾಗ್ ಭಾರ ಇಳಿಸುವಂತೆ ನಿರ್ದೇಶಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 1 ಮತ್ತು 2 ನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ರದ್ದುಪಡಿಸಿ ಮತ್ತು  ಶಾಲಾ ಬ್ಯಾಗ್  ಭಾರ ಇಳಿಸುವಂತೆ ನಿರ್ದೇಶಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ಬೋಧಿಸುವ ವಿಷಯ ಹಾಗೂ ಶಾಲಾ ಬ್ಯಾಗ್ ತೂಕದ ಕುರಿತು ಕೇಂದ್ರ ಸರ್ಕಾರದ ಸೂಚನೆಯಂತೆ ಮಾರ್ಗದರ್ಶಿ ಸೂತ್ರ ರೂಪಿಸುವಂತೆ ಹೊಸ ಆದೇಶದಲ್ಲಿ ತಿಳಿಸಲಾಗಿದೆ.  ಶಿಕ್ಷಣ ಸಂಸ್ಥೆಗಳು 1ಮತ್ತು 2ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ.

1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ ಹಾಗೂ ಗಣಿತ ವಿಷಯ ಹೊರತುಪಡಿಸಿ ಉಳಿದ ಯಾವುದೇ ವಿಷಯಗಳನ್ನು ಬೋಧಿಸುವಂತಿಲ್ಲ. ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಎನ್ ಸಿಇಆರ್ ಟಿ ಸಲಹೆಯಂತೆ ಗಣಿತ ಹಾಗೂ ಇವಿಎಸ್ ವಿಷಯ ಬೋಧಿಸಬಹುದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಹೆಚ್ಚುವರಿ ಪುಸ್ತಕಗಳು, ಸಲಕರಣೆಗಳನ್ನು ತರುವಂತೆ ವಿದ್ಯಾರ್ಥಿಗಳಿಗೆ ಹೇಳುವಂತಿಲ್ಲ, ಶಾಲಾ ಬ್ಯಾಗ್ ತೂಕ ನಿಗದಿಪಡಿಸಿದಕ್ಕಿಂತ ಹೆಚ್ಚಿಗೆ ಇರುವಂತಿಲ್ಲ ಆದೇಶದಲ್ಲಿ ತಿಳಿಸಲಾಗಿದೆ. 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 1.5 ಕೆಜಿ ಹಾಗೂ ಮೂರರಿಂದ ಐದನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ 2 ರಿಂದ 3 ಕೆಜಿಗಿಂತಲೂ ಹೆಚ್ಚು ತೂಕ ಇರುವಂತಿಲ್ಲ ಎಂದು ಸೂಚಿಸಲಾಗಿದೆ.
ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್  ತೂಕ 4 ಕೆಜಿ ಹಾಗೂ 8 ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕ  4.5 ಕೆಜಿಗಿಂತ ಹೆಚ್ಚು ಇರುವಂತಿಲ್ಲ. 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್  5 ಕೆಜಿಗಿಂತ ಹೆಚ್ಚು ತೂಕ ಇರಬಾರದೆಂದು ಹೊಸ ಆದೇಶದಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com