ಜೈಪುರ್: 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿರುವ ಪಂಚರಾಜ್ಯಗಳ ಚುನಾವಣೆ ಕಾವು ಹೆಚ್ಚುತ್ತಿದ್ದು, ಡಿಸೆಂಬರ್ 7ರಂದು ನಡೆಯುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತರ ಸಾಲ ಮನ್ನಾ ಹಾಗೂ ಯುವಕರಿಗೆ ನಿರುದ್ಯೋಗ ಭತ್ತೆ ಸೇರಿದಂತೆ ಹಲವು ಭರವಸೆಗಳನ್ನು ಮತದಾರರಿಗೆ ನೀಡಲಾಗಿದೆ.
ನಿರುದ್ಯೋಗಿಗಳಿಗೆ 3,500 ರು. ಮಾಸಿಕ ಭತ್ಯೆ, ಪರ್ತಕರ್ತರಿಗೆ ಕಾನೂನು ಭದ್ರತೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.
ಈ ಮುಂಚೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರಾಜ್ಯದ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅದನ್ನು ಈಗ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ನಮ್ಮ ಪ್ರಣಾಳಿಕೆ ಒಂದು ಪುಸ್ತಕ ಅಲ್ಲ. ಅದೊಂದು ನಮ್ಮ ಬದ್ಧತೆ ಎಂದು ಸಚಿನ್ ಪೈಲಟ್ ಅವರು ಹೇಳಿದ್ದಾರೆ.