
ಮುಂಬೈ: ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖ ಬಿಡುಗಡೆಯನ್ನು ವಿರೋಧಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಭೀಮಾ-ಕೊರಗಾಂವ್ ಹಿಂಸಾಚಾರ ಕೇಸಿಗೆ ಸಂಬಂಧಪಟ್ಟಂತೆ ಇವರು ಗೃಹ ಬಂಧನದಲ್ಲಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ರಂಜನ್ ಗೊಗೊಯ್ ಮುಂದೆ ಮಹಾರಾಷ್ಟ್ರ ಸರ್ಕಾರ ಈ ವಿಚಾರವನ್ನು ಪ್ರಸ್ತಾಪಿಸಲಿದ್ದು ದೆಹಲಿ ಹೈಕೋರ್ಟ್ ಆದೇಶಕ್ಕೆ ಕೂಡಲೇ ತಡೆ ತರಬೇಕೆಂದು ಮತ್ತು ನವ್ಲಾಖ ಅವರನ್ನು ಮತ್ತೆ ಗೃಹ ಬಂಧನದಲ್ಲಿರಿಸಬೇಕೆಂದು ಕೋರಲಿದೆ.
ಈ ಹಿಂದೆ ನಾಲ್ಕು ವಾರಗಳವರೆಗೆ ಗೃಹ ಬಂಧನವನ್ನು ವಿಸ್ತರಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಮೊನ್ನೆ ಸೋಮವಾರ ಗೌತಮ್ ನವ್ಲಾಖ ಅವರನ್ನು ದೆಹಲಿ ಹೈಕೋರ್ಟ್ ಬಿಡುಗಡೆ ಮಾಡಿತ್ತು. ಗೌತಮ್ ನವ್ಲಾಖ ಗೃಹ ಬಂಧನ ಕಾನೂನಿನಡಿಯಲ್ಲಿ ಸರಿಯಲ್ಲ ಎಂಬುದು ದೆಹಲಿ ಹೈಕೋರ್ಟ್ ವಾದವಾಗಿತ್ತು.
ಕಳೆದ ಜನವರಿಯಲ್ಲಿ ಪುಣೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರ ಪಾತ್ರವಿದೆ ಎಂದು ಮಹಾರಾಷ್ಟ್ರ ಸರ್ಕಾರ ಆಗಸ್ಟ್ 28ರಂದು ನವ್ಲಾಖ ಸೇರಿದಂತೆ ನಾಲ್ವರನ್ನು ಬಂಧಿಸಿತ್ತು. ಜನವರಿಯಲ್ಲಿ ಭೀಮಾ-ಕೊರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿಂಸಾಚಾರ ನಡೆದಿತ್ತು. ದಲಿತರು ಮತ್ತು ಮರಾಠರು ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟು 10 ಮಂದಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು.
ಕಾರ್ಯಕರ್ತರು ನಿಷೇಧಿತ ಉಗ್ರಗಾಮಿ ಸಂಘಟನೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರು ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿದೆ.
Advertisement