ಮೊದಲ ಬಾರಿಗೆ ಭಾರತದಿಂದ ಮಯಾನ್ಮಾರ್ ಗೆ ಏಳು ರೊಹಿಂಗ್ಯಾ ಮುಸ್ಲಿಮರ ಗಡಿಪಾರು

ಅಸ್ಸಾಂನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಏಳು ಮಂದಿ ರೊಹಿಂಗ್ಯಾ ಮುಸ್ಲಿಮರನ್ನು ಅವರ ತವರು ರಾಷ್ಟ್ರ ಮಯಾನ್ಮಾರ್ ಗೆ ಗಡಿ ಪಾರು ಮಾಡಲಾಗಿದೆ. ಭಾರತದಿಂದ ಇದೇ ಮೊದಲ ಬಾರಿಗೆ ಹೀಗೆ ಗಡಿಪಾರು ಮಾಡಲಾಗಿದೆ.

ನವ ದೆಹಲಿ: ಅಸ್ಸಾಂನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಏಳು ಮಂದಿ ರೊಹಿಂಗ್ಯಾ ಮುಸ್ಲಿಮರನ್ನು  ಅವರ  ತವರು ರಾಷ್ಟ್ರ ಮಯಾನ್ಮಾರ್ ಗೆ  ಗಡಿ ಪಾರು ಮಾಡಲಾಗಿದೆ.  ಭಾರತದಿಂದ ಇದೇ ಮೊದಲ ಬಾರಿಗೆ ಹೀಗೆ ಗಡಿಪಾರು ಮಾಡಲಾಗಿದೆ.

2012ರಲ್ಲಿ  ಮಯಾನ್ಮಾರ್ ನಿಂದ ಅಕ್ರವಾಗಿ ವಲಸೆ ಬಂದ ರೊಹಿಂಗ್ಯ ಮುಸ್ಲಿಮರನ್ನು ಬಂಧಿಸಲಾಗಿತ್ತು. ಮತ್ತು ಆಗಿನಿಂದಲೂ ಅಸ್ಸಾಂನ ಸಿಲ್ಚಾರ್ ನ ಕಾಚರ್  ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು.

ಇಂದು ಏಳು ಮಂದಿ ಮಯಾನ್ಮಾರ್ ಪ್ರಜೆಗಳನ್ನು  ಗಡಿಪಾರು ಮಾಡಲಾಗಿದೆ. ಅವರನ್ನು ಮಣಿಪುರದ ಮೊರೆ ಗಡಿ ಪ್ರದೇಶದ ಮೂಲಕ  ಮಾಯಾನ್ಮಾರ್ ಅಧಿಕಾರಿಗಳಿಗೆ  ಹಸ್ತಾಂತರಿಸಲಾಗಿದೆ ಎಂದು ಅಸ್ಸಾಂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ  ಭಾಸ್ಕರ್ ಜೆ ಮಹಾಂತ  ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ವಲಸೆಗಾರರ ​​ಗುರುತನ್ನು ದೃಢಪಡಿಸಿದ ಮಯಾನ್ಮಾರ್  ರಾಯಭಾರಿಗಳೊಂದಿಗೆ ಸಂವಹನ ನಡೆಸಲಾಗಿದೆ ಎಂದು ಮಹಾಂತ ಹೇಳಿದ್ದಾರೆ.

ನೆರೆಯ ದೇಶ ಮಯಾನ್ಮಾರ್  ಸರ್ಕಾರವು ರಖೈನ್ ರಾಜ್ಯದಲ್ಲಿ  ವಿಳಾಸಗಳನ್ನು ಪರಿಶೀಲಿಸಿದ ನಂತರ ಅಕ್ರಮ ವಲಸೆಗಾರರ ​​ ನಾಗರೀಕತೆಯ ದೃಢೀಕರಣ ಬೆಳಕಿಗೆ ಬಂದಿತ್ತು. ಎಲ್ಲರ  ಪ್ರಯಾಣದ ದಾಖಲೆಗಳನ್ನು ಮಾಯಾನ್ಮಾರ್ ನೀಡಿತ್ತು.

ಇಂದು ಬೆಳಗ್ಗೆ ಮಾಯಾನ್ಮಾರ್ ಗೆ ಗಡಿಪಾರು ಮಾಡದಂತೆ ರೊಹಿಂಗ್ಯಾ ವಲಸೆಗಾರರ ಪೈಕಿ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.  ಸುಪ್ರೀಂಕೋರ್ಟ್  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ಪೀಠವು ರೊಹಿಂಗ್ಯಾ ವಲಸೆಗಾರರು  ತಮ್ಮ ದೇಶದ ನಾಗರಿಕತೆಯನ್ನು ಒಪ್ಪಿಕೊಳ್ಳುವಂತೆ  ಸೂಚಿಸಿ ಗಡಿಪಾರು ಆದೇಶವನ್ನು ನೀಡಿತ್ತು.

 ಏಳು ಮಂದಿ ರೊಹಿಂಗ್ಯಾ ಮುಸ್ಲಿಮರು 2012ರಲ್ಲಿ ದೇಶಕ್ಕೆ ಅಕ್ರಮವಾಗಿ ವಲಸೆ ಬಂದಿದ್ದು, ವಿದೇಶಗರ ಕಾಯ್ದೆಯಡಿ ಅವರು ಆರೋಪಿಗಳೆಂದು ಕೇಂದ್ರಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು. ಅಲ್ಲದೇ,   ಒಂದು ತಿಂಗಳ ವಿಸಾ ಸೇರಿದಂತೆ ಏಳು ಜನರ ದೃಢೀಕರಣ ಪತ್ರವನ್ನು ಮಯಾನ್ಮಾರ್ ನೀಡಿದೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿತ್ತು.

ಕಳೆದ ವರ್ಷ ಸಂಸತ್ತಿಗೆ ಮಾಹಿತಿಗೆ ನೀಡಿದ ಕೇಂದ್ರಸರ್ಕಾರ ಯುಎನ್ ಹೆಚ್ ಸಿಆರ್ ದಾಖಲಿಸಿರುವಂತೆ ದೇಶದಲ್ಲಿ 14 ಸಾವಿರ ರೊಹಿಂಗ್ಯ ವಲಸೆಗಾರರು ವಾಸಿಸುತ್ತಿದ್ದಾರೆ ಎಂದು ಹೇಳಿತ್ತು.  ಆದಾಗ್ಯೂ, ನೆರವಿನ ಸಂಸ್ಥೆಗಳು ಅಂದಾಜು 40 ಸಾವಿರ ರೊಹಿಂಗ್ಯಾ ಜನರು ದೇಶದಲ್ಲಿದ್ದಾರೆ ಎಂದು ಅಂದಾಜು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com