ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಕೆಲ ಅಂಶಗಳನ್ನು ನಾನು ಒಪ್ಪುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಹೇಳಿದ್ದಾರೆ.
ಇಂದು ಎಚ್ ಟಿ ಲೀಡರ್ ಶಿಪ್ ಸಮಿತ್ ನಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಲೈಂಗಿಕತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಸುಪ್ರೀಂ ಕೋರ್ಟ್ ಸೆಕ್ಷನ್ 377 ಅನ್ನು ರದ್ದುಗೊಳಿಸಿ ತೀರ್ಪು ನೀಡುವಾಗ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ.
ವ್ಯಕ್ತಿಯೊಬ್ಬನಿಗೆ ತನ್ನದೇ ಆದ ಲೈಂಗಿಕತೆಯ ಬಗೆಗಿನ ನಿಲುವು ಸಹಜ. ಆದರೆ ಇದೇ ಕಾರಣಕ್ಕಾಗಿ ಆತನ ಬಗ್ಗೆ ತಾರತಮ್ಯಕಾರಿ ನಿಲುವು ತಳೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎನ್ನುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ನಿಲುವಿನ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದರು.
ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪಿನಿಂದಾಗಿ ಸೇನೆಯಲ್ಲಿ, ಶಾಲಾ ಹಾಸ್ಟೆಲ್ ಗಳಲ್ಲಿ ಲೈಂಗಿಕ ಚಟುವಟಿಕೆಗಳನ್ನು ಹೇಗೆ ನಿಯಂತ್ರಿಸುವುದು? ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಜೇಟ್ಲಿ, ಕೆಲ ಆಯ್ದ ಪದ್ಧತಿಗಳನ್ನು ರದ್ದುಗೊಳಿಸುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.