ಉದ್ಯಮಿ ವಿಜಯ್ ಮಲ್ಯರ ಬೆಂಗಳೂರಿನಲ್ಲಿರುವ ಆಸ್ತಿ ವಶಕ್ಕೆ ದೆಹಲಿ ನ್ಯಾಯಾಲಯ ಆದೇಶ !

ಫೆರಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಬೆಂಗಳೂರಿನಲ್ಲಿರುವ ಆಸ್ತಿಯನ್ನು ಇಡಿ ವಶಪಡಿಸಿಕೊಳ್ಳಲು ದೆಹಲಿಯ ಪಾಟಿಯಾಲ ನ್ಯಾಯಾಲಯ ಆದೇಶ ನೀಡಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ

ನವದೆಹಲಿ: ಫೆರಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಬೆಂಗಳೂರಿನಲ್ಲಿರುವ ಆಸ್ತಿಯನ್ನು ಇಡಿ ವಶಪಡಿಸಿಕೊಳ್ಳಲು ದೆಹಲಿಯ ಪಾಟಿಯಾಲ ನ್ಯಾಯಾಲಯ ಆದೇಶ ನೀಡಿದೆ.

ಮಲ್ಯ ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಂದು ಈ ಆದೇಶ  ಪ್ರಕಟಿಸಿದೆ.

ಸಾರ್ವಜನಿಕ ಹಣದೊಂದಿಗೆ ತಾನೂ ದೇಶದಿಂದ ಪಲಾಯನ ಆಗಿಲ್ಲ. ಬದಲಿಗೆ ಸರ್ಕಾರದೊಂದಿಗೆ  ಇತ್ಯರ್ಥಪಡಿಸಿಕೊಳ್ಳುವುದಾಗಿ ಇತ್ತೀಚಿಗೆ ವಿಜಯ್ ಮಲ್ಯ   ಹೇಳಿಕೆ ನೀಡಿದ್ದರು.

ದೇಶ ಬಿಡುವ ಮುಂಚಿತವಾಗಿಯೇ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಇತ್ಯರ್ಥಪಡಿಸಿಕೊಳ್ಳಲು ಯತ್ನಿಸಿದ್ದೆ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು, ನಂತರ ಅವರೊಂದಿಗೆ ಯಾವುದೇ ರೀತಿಯ ಔಪಚಾರಿಕ ಭೇಟಿ ನಡೆಸಿಲ್ಲ ಎಂದು ಮಲ್ಯ ಸ್ಪಷ್ಪಪಡಿಸಿದ್ದರು.

 ಫೆರಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ  ಪದೇ ಪದೇ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನೋಟಿಸ್ ನೀಡಿದ್ದರೂ ಮಲ್ಯ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜನವರಿ 4 ರಂದು  ಮಲ್ಯ ದೇಶಭ್ರಷ್ಟ ಅಪರಾಧಿ ಎಂದು ದೆಹಲಿ ನ್ಯಾಯಾಲಯ ಘೋಷಿಸಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ  ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಸಹ ಹೊರಡಿಸಲಾಗಿತ್ತು.

ಲಂಡನ್ ಮೂಲದ  ವಿದೇಶದಲ್ಲಿ ಕಿಂಗ್ ಫಿಶರ್ ಪ್ರಚಾರಕ್ಕಾಗಿ ಬೆನೆಟ್ಟನ್ ಫಾರ್ಮುಲಾ ಕಂಪನಿಯೊಂದಿಗೆ  1995 ಡಿಸೆಂಬರ್ ನಲ್ಲಿ ಮಲ್ಯ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಲ್ಯ ಅವರಿಗೆ ಇಡಿಯಿಂದ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ಮಲ್ಯ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮೇ 8, 2008ರಲ್ಲಿ  ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು ಎಂದು ಇಡಿ ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com