ಮಧ್ಯಪ್ರದೇಶ ಚುನಾವಣೆ: ನವರಾತ್ರಿ ಕಾರ್ಯಕ್ರಮಗಳಿಗೆ ರಾಜಕೀಯ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತಿಲ್ಲ!

ನವರಾತ್ರಿ ಆಚರಣೆ ಈಗಾಗಲೇ ಆರಂಭವಾಗಿದೆ. ಉತ್ತರ ಭಾರತದಲ್ಲಿ ಶರನ್ನವರಾತ್ರಿ ಆಚರಣೆ ಇನ್ನೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ನವರಾತ್ರಿ ಆಚರಣೆ ಈಗಾಗಲೇ ಆರಂಭವಾಗಿದೆ. ಉತ್ತರ ಭಾರತದಲ್ಲಿ ಶರನ್ನವರಾತ್ರಿ ಆಚರಣೆ ಇನ್ನೂ ಜೋರಾಗಿರುತ್ತದೆ. ಹೆಂಗಳೆಯರು, ಮಕ್ಕಳು, ಪುರುಷರು ಬೀದಿ ಬೀದಿಗಳಲ್ಲಿ ಬಣ್ಣಬಣ್ಣದ ಉಡುಗೆ ತೊಟ್ಟು ಗರ್ಭಾ ನೃತ್ಯ ಮಾಡುತ್ತಿರುತ್ತಾರೆ.

ಮಧ್ಯ ಪ್ರದೇಶದಲ್ಲಿ ಸದ್ಯದಲ್ಲಿಯೇ ವಿಧಾನಸಭೆ ಚುನಾವಣೆ ಇರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನವರಾತ್ರಿಯಲ್ಲಿ ಭಾಗವಹಿಸುವ ರಾಜಕೀಯ ನಾಯಕರ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ.

2015ರಲ್ಲಿ ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ರಾಜಕೀಯ ನಾಯಕರು ನವರಾತ್ರಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಭಾಗವಹಿಸಬಹುದು ಆದರೆ ಅದು ಸಾಮಾನ್ಯ ವ್ಯಕ್ತಿಯಾಗಿಯೇ ಹೊರತು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿಯಲ್ಲ ಎಂದು ಹೇಳಿತ್ತು.

ಮತದಾರರನ್ನು ಸೆಳೆಯಲು, ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲು ಯಾವುದೇ ರಾಜಕೀಯ ಪಕ್ಷಗಳಾಗಲಿ, ಮುಖಂಡರಾಗಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಬಳಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೂಡ ಚುನಾವಣಾ ಆಯೋಗ ಎಚ್ಚರಿಕೆ ನೀಡಿತ್ತು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಈ ಬಾರಿಯ ನವರಾತ್ರಿಗೆ ಇದು ಅನ್ವಯವಾಗಲಿದೆ. ಈ ಬಗ್ಗೆ ಕಣ್ಗಾವಲು ಇರಿಸಲು ವಿಶೇಷ ವಿಚಕ್ಷಣಾ ತಂಡ ಮತ್ತು ಕಾವಲು ಪಡೆ ಮಧ್ಯಪ್ರದೇಶದಲ್ಲಿ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳಲ್ಲಿ ಓಡಾಡುತ್ತಿದೆ. ಈ ಬಾರಿಯ ನವರಾತ್ರಿಗೆ ಮಧ್ಯ ಪ್ರದೇಶದಲ್ಲಿ ನವರಾತ್ರಿ ಕಾರ್ಯಕ್ರಮಗಳು, ಗರ್ಭಾ ನೃತ್ಯ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತಿಲ್ಲ.

ಒಂದು ವೇಳೆ ಭಾಗವಹಿಸಿದರೆ ಧಾರ್ಮಿಕ ಸಂಸ್ಥೆಗಳು(ದುರುಪಯೋಗ ತಡೆಯುವುದು) ಕಾಯ್ದೆ 1988ರಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಧ್ಯ ಪ್ರದೇಶ ಮುಖ್ಯ ಚುನಾವಣಾ ಆಯುಕ್ತ ವಿ ಎಲ್ ಕಾಂತ ರಾವ್ ತಿಳಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ ಅಥವಾ ಕಾರ್ಯಕ್ರಮಗಳಲ್ಲಿ ವಿನಿಯೋಗಿಸಿದ್ದರೆ ಅದರ ಖರ್ಚನ್ನು ಚುನಾವಣಾ ಸಂಬಂಧಿ ಖರ್ಚಿನ ಜೊತೆ ಸೇರಿಸಿ ಲೆಕ್ಕ ಹಾಕಲಾಗುತ್ತದೆ. ಅಷ್ಟಕ್ಕೂ ಒಬ್ಬ ಅಭ್ಯರ್ಥಿ ಒಂದು ಚುನಾವಣೆಯಲ್ಲಿ 28 ಲಕ್ಷದವರೆಗೆ ಖರ್ಚು ಮಾಡಬಹುದಾಗಿದೆ. ಆಯೋಗದಿಂದಲೇ ಅದಕ್ಕೆ ಅವಕಾಶವಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com