ಬಿಜೆಪಿ ಸಚಿವ, ಶಾಸಕರಿಂದ ಹೆಣ್ಣುಮಕ್ಕಳನ್ನು ಕಾಪಾಡಿ: ರಾಹುಲ್ ಗಾಂಧಿ

ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಶೀಯೋಪುರ್: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಬಿಜೆಪಿಯ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆ, ಬಿಜೆಪಿ ಕೆ ಮಂತ್ರಿ ಸೇ ಬೇಟಿ ಬಚಾವೋ ಆಗಬೇಕು ಎಂದು ಹೇಳಿದ್ದಾರೆ.
ಇಂದು ಮಧ್ಯ ಪ್ರದೇಶದ ಶೀಯೋಪುರ್ ದಲ್ಲಿ ಕಾಂಗ್ರೆಸ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ರೈತರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ  ಸರ್ಕಾರ ಹಾಗೂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲಾ ಹೆಣ್ಣು ಮಕ್ಕಳು ನಮ್ಮ ಮೋದಿ ಸರ್ಕಾರದ ಸಚಿವ(ವಿದೇಶಾಂಗ ಖಾತೆಯ ರಾಜ್ಯ ಸಚಿವ ಎಂಜೆ ಅಕ್ಬರ್)ರ ಕಡೆ ಬೆರಳು ಮಾಡುತ್ತಿದ್ದಾರೆ. ಆದರೆ ಮೋದಿ ಮಾತ್ರ ಎಂದಿನಂತೆ ಮೌನವಾಗಿದ್ದಾರೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ(ಕುಲದೀಪ್ ಸಿಂಗ್ ಸೆಂಗರ್ ) ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾಗಲೂ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ(ಯೋಗಿ ಆದಿತ್ಯನಾಥ್) ಮೌನವಾಗಿದ್ದರು ಎಂದರು.
ಬಿಜೆಪಿಯ ಘೋಷಣೆ, ಬೇಟಿ ಬಚಾವೋ ಬೇಟಿ ಪಡಾವೋ ಈಗ ಬಿಜೆಪಿಯ ಮಂತ್ರಿ ಮತ್ತು ಶಾಸಕರಿಂದ ಹೆಣ್ಣು ಮಕ್ಕಳನ್ನು ಕಾಪಾಡಿ ಎಂದು ಬದಲಾಯಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಿ ಟೂ ಅಭಿಯಾನದಲ್ಲಿ ಕೇಂದ್ರ ಸಚಿವ ಅಕ್ಬರ್ ವಿರುದ್ಧ ಡಜನ್ ಗೂ ಹೆಚ್ಚು ಮಹಿಳಾ ಪತ್ರಕರ್ತೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com