ಕೆಂಪು ಕೋಟೆ ಮೇಲೆ ಅ.21 ಕ್ಕೆ ಧ್ವಜಾರೋಹಣ, ಪ್ರಧಾನಿ ಮೋದಿ ಭಾಗಿ: ವಿಶೇಷ ಏನು ಗೊತ್ತೇ?
ದೇಶ
ಕೆಂಪು ಕೋಟೆ ಮೇಲೆ ಅ.21ಕ್ಕೆ ಧ್ವಜಾರೋಹಣ, ಪ್ರಧಾನಿ ಮೋದಿ ಭಾಗಿ: ವಿಶೇಷ ಏನು ಗೊತ್ತೇ?
ಅ.21 ಕ್ಕೆ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ನವದೆಹಲಿ: ಅ.21 ಕ್ಕೆ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆಗಳಂದು ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ಈ ಬಾರಿ ಅ.21 ರಂದು ಧ್ವಜಾರೋಹಣ ಮಾಡುತ್ತಿರುವುದಕ್ಕೆ ವಿಶೇಷ ಕಾರಣವೊಂದಿದೆ. ಅ. 17 ರಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅ.21 ರಂದು ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.
ಅ.21 ರಂದು ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಗೌರ್ನಮೆಂಟ್ ನ ಸ್ಥಾಪನೆಯ 75 ನೇ ವಾರ್ಷಿಕೋತ್ಸವ ಆಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸುಭಾಷ್ ಚಂದ್ರ ಬೋಸರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ.
ಬಿಜೆಪಿ ಕಾರ್ಯಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪಕ್ಷಾತೀತವಾಗಿ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ಸ್ಮರಿಸುತ್ತದೆ. ದೇಶಕ್ಕೆ ಕೊಡುಗೆ ನೀಡಿದ್ದವರನ್ನು ಕಾಂಗ್ರೆಸ್ ಪಕ್ಷ ಹಲವು ದಶಕಗಳ ಕಾಲ ಕಡೆಗಣಿಸಿತ್ತು ಅಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಬಿಜೆಪಿ ಸ್ಮರಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್, ಬೋಸ್, ಪಟೇಲ್ ಅವರನ್ನು ಮರೆತಿತ್ತು. ಆದರೆ ಬಿಜೆಪಿ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾದ ಎಲ್ಲರನ್ನೂ ಸ್ಮರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅ.21 ರಂದು ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಗೌರ್ನಮೆಂಟ್ ನ ಸ್ಥಾಪನೆಯ 75 ನೇ ವಾರ್ಷಿಕೋತ್ಸವ ಆಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಲಾಗುತ್ತದೆ. ಇದೇ ವೇಳೆ ಪ್ರಧಾನಿ ಮೋದಿ ಆಝಾದ್ ಹಿಂದ್ ಫೌಜ್ ಮ್ಯೂಸಿಯಂ ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. 1943 ರ ಅ.21 ರಂದು ನೇತಾಜಿ ಸುಭಾಷ್ ಚಂದ್ರ ಬೋಸರು ಭಾರತ ದೇಶದ ಪ್ರಥಮ ಸ್ವಾಯತ್ತ ಸರ್ಕಾರವನ್ನು ರಚಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ