ಪ್ರಧಾನಮಂತ್ರಿ ಮುದ್ರಾ ಯೋಜನೆ: ಶೇ.90ಕ್ಕೂ ಅಧಿಕ ಮಂದಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ. ಸಾಲ!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ)ಯಡಿ ಶೇಕಡಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ)ಯಡಿ ಶೇಕಡಾ 90ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಿಕ್ಕಿದ ಸಾಲದ ಮೊತ್ತ 50 ಸಾವಿರಕ್ಕೂ ಕಡಿಮೆಯಾಗಿದೆ. ಸರ್ಕಾರದ ಅಂಕಿಅಂಶಗಳಿಂದ ಇದು ತಿಳಿದುಬಂದಿದೆ.

ಯೋಜನೆಯಡಿ ಸಣ್ಣ ಉದ್ದಿಮೆದಾರರಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಆದರೆ ಉದ್ದಿಮೆಗಳ ಷೇರುದಾರರು, ವ್ಯಾಪಾರಿಗಳು, ಸಂಘಟನೆಗಳು, ಬ್ಯಾಂಕು ಅಧಿಕಾರಿಗಳು, ಯೋಜನೆಯ ತಜ್ಞರು ಹೇಳುವ ಪ್ರಕಾರ, ಒಂದು ಸಣ್ಣ ಉದ್ದಿಮೆ ಆರಂಭಿಸಲು ಕೂಡ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಇಂದು ಅಗತ್ಯವಿರುತ್ತದೆ. ಸರ್ಕಾರ ನೀಡುವ ಸಾಲದ ಮೊತ್ತ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಮೂರು ವಿಭಾಗಗಳಲ್ಲಿ ಸಾಲವನ್ನು ನೀಡಲಾಗುತ್ತದೆ. ಶಿಶು ಸಾಲ(50 ಸಾವಿರದವರೆಗೆ), ಕಿಶೋರ(50 ಸಾವಿರದಿಂದ 5 ಲಕ್ಷಗಳವರೆಗೆ) ಮತ್ತು ತರುಣ(5 ಲಕ್ಷದಿಂದ 10 ಲಕ್ಷದವರೆಗೆ) ಎಂಬ ಮೂರು ವಿಭಾಗಗಳಿವೆ. ಇದುವರೆಗೆ ಸುಮಾರು 1.04 ಕೋಟಿಗೂ ಅಧಿಕ ಮಂದಿ ಕಿಶೋರ ಸಾಲ ತೆಗೆದುಕೊಂಡಿದ್ದು ತರುಣ ವಿಭಾಗದಡಿ ಸಾಲ ಪಡೆದವರ ಸಂಖ್ಯೆ 19 ಲಕ್ಷ ಮಂದಿ.

50 ಸಾವಿರಕ್ಕಿಂತ ಅಥವಾ ಅದಕ್ಕಿಂತ ಕಡಿಮೆ ಸಾಲ ನೀಡುವುದು ಯೋಜನೆಯ ಉದ್ದೇಶವನ್ನೇ ಅಳಿಸಿಹಾಕುತ್ತದೆ. ದೆಹಲಿಯ ಸಾದಾರ್ ಬಜಾರ್ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರಾಕೇಶ್ ಕುಮಾರ್ ಹೇಳುವ ಪ್ರಕಾರ, ಸಣ್ಣ ಉದ್ದಿಮೆಗಳನ್ನು ಸಹ 40-50 ಸಾವಿರ ರೂಪಾಯಿಗಳಿಂದ ಆರಂಭಿಸಲು ಸಾಧ್ಯವಿಲ್ಲ. ದೆಹಲಿಯ ಸಾದಾರ್ ಮಾರುಕಟ್ಟೆಯಲ್ಲಿ ರಸ್ತೆ ಬದಿ ವ್ಯಾಪಾರಿ ಬಳಿ ಕೂಡ 50 ಸಾವಿರಕ್ಕಿಂತ ಅಧಿಕ ಮೌಲ್ಯದ ವಸ್ತುಗಳಿರುತ್ತವೆ ಎನ್ನುತ್ತಾರೆ.
ಅನೇಕ ಸಂದರ್ಭಗಳಲ್ಲಿ ಸಾಲ ಪಡೆಯುವ ವ್ಯಾಪಾರಿಗಳು ಮಧ್ಯವರ್ತಿಗಳ ಸಹಾಯದಿಂದ ಸಾಲ ಪಡೆಯುತ್ತಿದ್ದು ಅವರಿಗೆ ಕಮಿಷನ್ ನೀಡಬೇಕಾಗುತ್ತದೆ. ಇಂತವರಲ್ಲಿ ಅನೇಕ ಮಧ್ಯವರ್ತಿಗಳು ಬ್ಯಾಂಕಿಗೆ ಹಣ ಪಾವತಿಸುವುದಿಲ್ಲ, ಸಣ್ಣ ಉದ್ದಿಮೆದಾರರಿಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

ಆದರೆ ಭಾರತೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಒಕ್ಕೂಟದ ಅನಿಲ್ ಭಾರದ್ವಾಜ್ ಬೇರೆ ಅಭಿಪ್ರಾಯ ಹೊಂದಿದ್ದಾರೆ. ಸಣ್ಣ ಹಣಕಾಸಿನ ಉದ್ದಿಮೆಗಳಿಗೆ ನೀಡುವ ಸಾಲ ಇದಾಗಿದ್ದು ಗ್ರಾಮೀಣ ಪ್ರದೇಶಗಳ ವ್ಯಾಪಾರಿಗಳಿಗೆ ಸಹಾಯವಾಗುತ್ತದೆ. ಜನರು ಚಹಾ ವ್ಯಾಪಾರ ಅಥವಾ ಅಂತಹ ಇತರ ಉದ್ದಿಮೆಗಳನ್ನು ಆರಂಭಿಸಬಹುದು ಎನ್ನುತ್ತಾರೆ.



ಈ ಮಧ್ಯೆ ವ್ಯಾಪಾರಿಗಳು ಮತ್ತು ಜನರ ವಿರೋಧದ ನಂತರ ಸರ್ಕಾರ ಮುದ್ರಾ ಯೋಜನೆಯ ಪರಿಣಾಮಗಳನ್ನು ವಿಸ್ತಾರವಾದ ಅಧ್ಯಯನ ನಡೆಸಲು ಮುಂದಾಗಿದೆ. ಅಧ್ಯಯನದಲ್ಲಿ ಸುಮಾರು 1 ಲಕ್ಷ ಮುದ್ರಾ ಯೋಜನೆ ಫಲಾನುಭವಿಗಳನ್ನು ಒಳಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com