ನವದೆಹಲಿ: ಮುಜಾಫರ್ ಪುರ್ ವಸತಿ ನಿಲಯದಲ್ಲಿ ಹಲವು ಯುವತಿಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ತನಿಖೆಗೆ ಸಂಬಂಧಪಟ್ಟಂತೆ ಸಲ್ಲಿಸಲಾಗಿರುವ ವಿವರಗಳು ಭಯಾನಕವಾಗಿವೆ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ.
ನ್ಯಾಯಮೂರ್ತಿ ಮದನ್ ಬಿ ಲೋಕೂರು ನೇತೃತ್ವದ ನ್ಯಾಯಪೀಠ ಸಿಬಿಐ ಸಲ್ಲಿಸಿದ್ದ ಸ್ಥಿತಿ ವರದಿಯನ್ನು ಉಲ್ಲೇಖಿಸಿ, ಇಲ್ಲಿ ಏನು ನಡೆಯುತ್ತಿದೆ, ಇದೊಂದು ಭಯಾನಕ ಎಂದು ಬಣ್ಣಿಸಿದ್ದಾರೆ.
ನಿರಾಶ್ರಿತರ ಮನೆಯ ಮಾಲೀಕ ಬ್ರಜೇಶ್ ಠಾಕೂರ್ ವಿರುದ್ಧ ಸಿಬಿಐ ಉಲ್ಲೇಖಿಸಿರುವ ಆರೋಪಗಳನ್ನು ಕೂಡ ಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಅವರಿಗೆ ನೊಟೀಸ್ ಜಾರಿ ಮಾಡಿ ಅವರನ್ನು ರಾಜ್ಯದಿಂದ ಹೊರಗಿನ ಜೈಲಿಗೆ ವರ್ಗಾಯಿಸಬಾರದು ಏಕೆ ಎಂದು ಕೇಳಿದೆ.
ಬ್ರಜೇಶ್ ಠಾಕೂರ್ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು ಆತ ನ್ಯಾಯಾಂಗ ಬಂಧನದಲ್ಲಿರುವ ಜೈಲಿನೊಳಗಿಂದ ಅವರ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ಆರೋಪಿಸಿದೆ.
ಸುಪ್ರೀಂ ಕೋರ್ಟ್ ನ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಾಜೀರ್ ಮತ್ತು ದೀಪಕ್ ಗುಪ್ತಾ ಕೂಡ ಇದ್ದಾರೆ. ಮಾಜಿ ಸಚಿವೆ ಮಂಜು ವರ್ಮ ಅವರ ಪತಿ ಚಂದ್ರಶೇಖರ ವರ್ಮ ಅವರನ್ನು ಪತ್ತೆಹಚ್ಚುವಲ್ಲಿ ವಿಳಂಬವಾಗುವುದಕ್ಕೆ ಕಾರಣವೇನು ಎಂಬುದನ್ನು ಕೂಡ ವಿವರಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ಮತ್ತು ಬಿಹಾರ ಪೊಲೀಸರಿಗೆ ಕೇಳಿದೆ.
ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿರುವ ಬಗ್ಗೆ ಮತ್ತು ಅದರಲ್ಲಿ ಮಂಜು ವರ್ಮಾ ಮತ್ತು ಅವರ ಪತಿ ಚಂದ್ರಶೇಖರ್ ವರ್ಮಾ ಪಾತ್ರವೇನು ಎಂಬುದನ್ನು ತನಿಖೆ ಮಾಡುವಂತೆ ಬಿಹಾರ ಪೊಲೀಸರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಬಿಹಾರದ ಮುಜಾಫರ್ ಪುರ ವಸತಿ ನಿಲಯದಲ್ಲಿ ನಡೆದ ಲೈಂಗಿಕ ಶೋಷಣೆ ಕೇಸಿಗೆ ಸಂಬಂಧಪಟ್ಟಂತೆ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮ ರಾಜೀನಾಮೆ ನೀಡಿದ್ದರು. ಕೇಸಿನ ವಿಚಾರಣೆ ನಡೆಸುತ್ತಿರುವ ಸಿಬಿಐ ತಂಡವನ್ನು ಬದಲಾಯಿಸಬಾರದು ಎಂದು ಹೇಳಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ.
Advertisement