ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ: ಬ್ಯಾಂಕ್ ಗಳಿಗೆ ಯುಐಡಿಎಐ ಸ್ಪಷ್ಟನೆ

ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಆಧಾರ್ ಇ-ಕೆವೈಸಿ ಬಳಸುವಂತೆ ಬ್ಯಾಂಕ್ ಗಳಿಗೆ  ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಸ್ಪಷ್ಟಪಡಿಸಿದೆ.
ಸರ್ಕಾರದ ಕಲ್ಯಾಣ ಯೋಜನೆಗಳನ್ನು ಹೊರತುಪಡಿಸಿ ಇತರೆ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಬ್ಯಾಂಕ್ ಗಳು ಕಾನೂನು ಸಲಹೆ ಕೇಳಿ ಯುಐಡಿಎಐಗೆ ಪತ್ರ ಬರೆದಿದ್ದವು. 
ಈ ಸಂಬಂಧ ಕಳೆದ ವಾರ ಬ್ಯಾಂಕ್ ಗಳಿಗೆ ಪತ್ರ ಬರೆದಿರುವ ಯುಐಡಿಎಐ, ಯಾವುದಕ್ಕೆ ಮತ್ತು ಯಾವ ಸನ್ನಿವೇಶದಲ್ಲಿ ಆಧಾರ್ ಬಳಸಬಹುದು ಎಂಬುದರ ಬಗ್ಗೆ ವಿವರಣೆ ನೀಡಿದೆ. ಅಲ್ಲದೆ ಇದರ ಪ್ರತಿಯನ್ನು ಆರ್ ಬಿಐಗೂ ಕಳುಹಿಸಲಾಗಿದೆ ಎಂದು ಯುಐಡಿಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರಿ ಸಬ್ಸಿಡಿ ಪಡೆಯಲು ಮತ್ತು ಕಲ್ಯಾಣ ಯೋಜನೆಗಳ ನೇರ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಬಹುದು. ಇತರೆ ಗ್ರಾಹಕರಿಗೆ ಪರಿಶೀಲನೆಗಾಗಿ ಮಾತ್ರ ಆಧಾರ್ ಬಳಸಿ. ಇದು ಸಹ ಕಡ್ಡಾಯವಲ್ಲ. ಸ್ವಯಂ ಪ್ರೇರಣೆಯಿಂದ ಮಾತ್ರ ಎಂದು ಹೇಳಿರುವುದಾಗಿ ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಶುಕ್ರವಾರವಷ್ಟೆ ಕೇಂದ್ರ ಸರ್ಕಾರ, ಮೊಬೈಲ್ ನೆಟ್ವರ್ಕ್, ದೂರವಾಣಿ ಸೇವಾ ಸಂಸ್ಥೆಗಳು ಕೂಡಲೇ ಆಧಾರ್ ಆಧಾರಿತ ಇ-ಕೆವೈಸಿಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿತ್ತು.
ಮೊಬೈಲ್ ಸೇವೆಗಾಗಿ ಆಧಾರ್ ಕಡ್ಡಾಯ ಮಾಡದತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ಮೊದಲ ಹಂತ ಎಂಬಂತೆ ಟೆಲಿಕಾಂ ಸೇವಾ ಸಂಸ್ಥೆಗಳಿಗೆ ಸೂಚನೆ ರವಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com