ಬಾನೆತ್ತರಕ್ಕೆ ನಿಂತು ನಮಗೆಲ್ಲರಿಗೂ ಸ್ಫೂರ್ತಿ ನೀಡುವ 'ಭೂಮಿ ಪುತ್ರ' ಸರ್ದಾರ್ ಪಟೇಲ್:ಪ್ರಧಾನಿ ನರೇಂದ್ರ ಮೋದಿ

ಅಕ್ಟೋಬರ್‌ 31, ದೇಶದ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರ 143ನೇ ಜಯಂತಿ...
ಇಂದು ಲೋಕಾರ್ಪಣೆಗೊಳ್ಳುತ್ತಿರುವ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಬಾಯಿ ಪಟೇಲ್ ಮೂರ್ತಿ
ಇಂದು ಲೋಕಾರ್ಪಣೆಗೊಳ್ಳುತ್ತಿರುವ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಬಾಯಿ ಪಟೇಲ್ ಮೂರ್ತಿ

ಅಕ್ಟೋಬರ್‌ 31, ದೇಶದ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರ 143ನೇ ಜಯಂತಿ. ನರ್ಮದಾ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಏಕೀಕರಣದ ಹರಿಕಾರನ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಲಿದ್ದಾರೆ.

ಈ ಸಂದರ್ಭದಲ್ಲಿ ಪಟೇಲರನ್ನು ನೆನೆಯುತ್ತಾ ಲೇಖನವೊಂದನ್ನು ಬರೆದಿದ್ದಾರೆ, ಅದರ ಕನ್ನಡ ಸಾರಾಂಶ ಹೀಗಿದೆ:

ಭಾರತದ ಇತಿಹಾಸದಲ್ಲಿ 1947ನೇ ಇಸವಿಯ ಉತ್ತರಾರ್ಧ ಅತ್ಯಂತ ಮಹತ್ವದ್ದು. ವಸಾಹತುಶಾಹಿ ಆಡಳಿತ ಕೊನೆಯಾಗಿ ಭಾರತ ಇಬ್ಭಾಗವಾಗುವುದು ಅಂದು ತೀರ್ಮಾನವಾಗಿತ್ತು. ಅದಕ್ಕಿಂತ ಹೆಚ್ಚಿಗೆ ಯಾವುದೇ ವಿಷಯ ಭಾರತದ ಮಟ್ಟಿಗೆ ಅಂದು ಖಾತರಿಯಿರಲಿಲ್ಲ. ಬೆಲೆಗಳ ಬೆಲೆ ಗಗನಕ್ಕೇರುತ್ತಿತ್ತು. ಆಹಾರದ ಕೊರತೆ ಅಂದು ಸಾಮಾನ್ಯವಾಗಿತ್ತು. ಅವೆಲ್ಲಕ್ಕಿಂತ ಮುಖ್ಯವಾಗಿ ಅಂದು ಭಾರತದಲ್ಲಿ ಏಕತೆಯ ಅನಿವಾರ್ಯತೆಯಿತ್ತು ಮತ್ತು ಕೆಲ ನಾಯಕರಲ್ಲಿ ಏಕತೆಯನ್ನು ಸಾರಲೇಬೇಕೆಂಬ ತುಡಿತ, ಹಪಹಪಿಯಿದ್ದಿತ್ತು.

ಈ ಸಂದರ್ಭದಲ್ಲಿಯೇ ಅಂದರೆ 1947ರ ಜೂನ್ ಹೊತ್ತಿಗೆ ಭಾರತದಲ್ಲಿ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಜಾರಿಗೆ ಬಂದಿತು. ನಂತರ ಅದು ಸ್ಟೇಟ್ಸ್ ಸಚಿವಾಲಯ ಎಂದಾಯಿತು. ಭಾರತ ಸರ್ಕಾರದ ಇಲಾಖೆಯಾಗಿದ್ದು ರಾಜ್ಯಗಳ ಸಚಿವರು ಅದರ ಉಸ್ತುವಾರಿ ನೋಡಿಕೊಳ್ಳುತ್ತಿರುವುದು. ಅಂದರೆ ರಾಜಮನೆತನಗಳು ಮತ್ತು ಸ್ವತಂತ್ರ ಭಾರತದ ನಡುವೆ ಸಂಬಂಧ ಹೊಂದಾಣಿಕೆ ಮಾಡಿಕೊಳ್ಳುವುದು, ನೋಡಿಕೊಳ್ಳುವುದು ಅದರ ಜವಾಬ್ದಾರಿಯಾಗಿದೆ. ಸ್ಟೇಟ್ ಡಿಪಾರ್ಟ್ ಮೆಂಟ್ ಬ್ರಿಟಿಷ್ ಸರ್ಕಾರದ ರಾಜಕೀಯ ಇಲಾಖೆಗೆ ಬದಲಾಗಿ ಇರುವಂತಹದ್ದು. ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮಿನಿಸ್ಟರ್ ಆಫ್ ಸ್ಟೇಟ್ ಕೂಡ ಆದರು. ಆಗ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿದ್ದವರು ವಿ.ಪಿ.ಮೆನನ್.

ವಲ್ಲಭಬಾಯಿ ಪಟೇಲರ ಕೆಲಸದ ಶೈಲಿಯೇ ಹಾಗೆ. ಅವರ ಕೆಲಸದಲ್ಲಿ ನಿಖರತೆ, ದೃಢತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳಿದ್ದವು. ಕಡಿಮೆ ಅವಧಿಯಲ್ಲಿ ಕಷ್ಟದ ಕೆಲಸಗಳನ್ನು ಕೂಡ ಮಾಡುತ್ತಿದ್ದರು. ಅವರು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ತಮ್ಮ ದೇಶವನ್ನು ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ. ಒಂದೊಂದಾಗಿಯೇ ಪಟೇಲರು ಮತ್ತು ಅವರ ತಂಡದವರು ರಾಜಮನೆತನದವರ ಜೊತೆ ಹೊಂದಾಣಿಕೆ ಮಾಡಿಕೊಂಡು ಕೊನೆಗೆ ಸ್ವತಂತ್ರ ಭಾರತದ ಭಾಗವಾಗಿಯೇ ಹೋಯಿತು.

ಹೋಳು ಹೋಳಾಗಿದ್ದ ಭಾರತ ಏಕತೆಯಾಗಿ ಇಂದು ಇರುವ ಭಾರತದ ಭೂಪಟ ರೂಪುಗೊಳ್ಳಲು ಕಾರಣಕರ್ತೃ ಸರ್ದಾರ್ ವಲ್ಲಭಬಾಯಿ ಪಟೇಲರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ವಿ ಪಿ ಮೆನನ್ ಸರ್ಕಾರಿ ಸೇವೆಯಿಂದ ನಿವೃತ್ತರಾಗಲು ಬಯಸಿದ್ದರು. ಆದರೆ ಇದು ಸೇವೆಯಿಂದ ನಿವೃತ್ತಿ ಹೊಂದಿ ವಿರಾಮ ಪಡೆಯುವ ಸಮಯವನ್ನ ಎಂದು ಪಟೇಲರು ಮೆನನ್ ಗೆ ಹೇಳಿದರಂತೆ. ರಾಜ್ಯ ಇಲಾಖೆಗೆ ಮೆನನ್ ಅವರನ್ನು ಪಟೇಲರು ಕಾರ್ಯದರ್ಶಿಯಾಗಿ ಮಾಡಿದರು. ಇದನ್ನು ಮೆನನ್ ತಮ್ಮ ದ ಸ್ಟೋರಿ ಆಫ್ ದ ಇಂಟಗ್ರೇಷನ್ ಆಫ್ ಇಂಡಿಯನ್ ಸ್ಟೇಟ್ಸ್ ನಲ್ಲಿ ಬರೆದಿದ್ದಾರೆ. ಉತ್ಸಾಹದಿಂದ ಆ ಸಂದರ್ಭದಲ್ಲಿ ಪಟೇಲರು ಎಲ್ಲರಿಗೂ ಕೆಲಸ ಮಾಡಲು ಹೇಗೆ ಪ್ರೋತ್ಸಾಹಿಸುತ್ತಿದ್ದರು ಎಂದು ಬರೆದಿದ್ದಾರೆ. ಪಟೇಲರಿಗೆ ಭಾರತೀಯರ ಹಿತಾಸಕ್ತಿ ಮುಖ್ಯವಾಗಿತ್ತು. ಅದರಲ್ಲಿ ಅವರೆಂದೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.

1947ರ ಆಗಸ್ಟ್ 15ರ ಮಧ್ಯರಾತ್ರಿ ಭಾರತ ಹೊಸ ಉದಯ ಕಂಡಿತು. ಒಂದು ಹಂತದವರೆಗೆ ಕನಸು ಈಡೇರಿದರೂ ಕೂಡ ರಾಷ್ಟ್ರ ನಿರ್ಮಾಣದ ಕೆಲಸ ಪೂರ್ಣವಾಗಿರಲಿಲ್ಲ. ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿ ಪಟೇಲರು ಭಾರತದ ನಿರ್ಮಾಣಕ್ಕೆ ಆಡಳಿತಾತ್ಮಕ ಚೌಕಟ್ಟನ್ನು ನೀಡಿದರು. ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಏಳಿಗೆಗಾಗಿ ಶ್ರಮಿಸಲು ಹಾತೊರೆಯುತ್ತಿದ್ದರು.

ಆಡಳಿತ ವಿಚಾರದಲ್ಲಿ ಪಟೇಲರದ್ದು ಎತ್ತಿದ ಕೈ. ಮುಖ್ಯವಾಗಿ 1920ರ ದಶಕದಲ್ಲಿ ಗುಜರಾತ್ ನ ಅಹಮದಾಬಾದ್ ನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸ್ವತಂತ್ರ ಭಾರತದ ಆಡಳಿತಾತ್ಮಕ ಚೌಕಟ್ಟನ್ನು ಅಂದೇ ತಮ್ಮ ಕೆಲಸಗಳಲ್ಲಿ ನಿರೂಪಿಸುತ್ತಿದ್ದರು.

ಅಹಮದಾಬಾದ್ ನಗರದ ಸ್ವಚ್ಛತೆಗೆ ಅವರು ಮಾಡಿದ ಕೆಲಸ ಶ್ಲಾಘನೀಯ. ನಗರದಲ್ಲಿ ಚರಂಡಿಗಳ ಸ್ವಚ್ಛತೆ ಮತ್ತು ನೀರಿನ ಸುಗಮ ಹರಿಯುವಿಕೆಗೆ, ನಗರದ ಮೂಲಭೂತ ಸೌಕರ್ಯ, ರಸ್ತೆ, ವಿದ್ಯುಚ್ಛಕ್ತಿ ಮತ್ತು ಶಿಕ್ಷಣಕ್ಕೆ ಪಟೇಲರು ಆದ್ಯತೆ ನೀಡುತ್ತಿದ್ದರು.
ಇಂದು ಭಾರತದಲ್ಲಿ ವೈವಿಧ್ಯ ಸಹಕಾರಿ ವಲಯ ಕಂಡುಬರುತ್ತಿದ್ದರೆ ಅದರ ಯಶಸ್ಸು ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಸಲ್ಲಬೇಕು. ಸ್ಥಳೀಯ ಸಮುದಾಯ ಅದರಲ್ಲೂ ಮಹಿಳೆಯರಲ್ಲಿ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಹಾಲಿನ ಉತ್ಪಾದನೆಗೆ ಗುಜರಾತ್ ನಲ್ಲಿ ಅಮೂಲ್ ಮೂಲಕ ಕ್ರಾಂತಿ ಮಾಡಿದರು. ಸಹಕಾರಿ ವಸತಿ ಸಂಸ್ಥೆಗಳನ್ನು ಜನಪ್ರಿಯಗೊಳಿಸಿದರು. ಆ ಮೂಲಕ ಆಶ್ರಯ ಮನೆಗಳನ್ನು ಸ್ಥಾಪಿಸಿದರು.

ಸರ್ದಾರ್ ಪಟೇಲರಲ್ಲಿ ಎದ್ದು ಕಾಣುತ್ತಿದ್ದ ಗುಣ ನಂಬಿಕೆ ಮತ್ತು ಸಮಗ್ರತೆ. ದೇಶದ ರೈತರಿಗೆ ಅವರ ಮೇಲೆ ನಂಬಿಕೆ ಉಂಟಾಗಿತ್ತು. ಅಷ್ಟಕ್ಕೂ ಅವರು ಸ್ವತಃ ರೈತನ ಮಗ. ಬರ್ದೊಲಿ ಸತ್ಯಾಗ್ರಹದ ಮುಂಚೂಣಿ ವಹಿಸಿದ್ದರು. ಕಾರ್ಮಿಕ ವರ್ಗದ ಆಶಾಕಿರಣವಾಗಿದ್ದರು.

ಪಟೇಲರಿಗೆ ದೇಶದ ಆರ್ಥಿಕ ಮತ್ತು ಕೈಗಾರಿಕೆ ಬೆಳವಣಿಗೆಗೆ ಸರಿಯಾದ ದೂರದೃಷ್ಟಿಯಿದ್ದದ್ದರಿಂದ ಉದ್ಯಮಿಗಳು ಅವರ ಜೊತೆ ಕೆಲಸ ಮಾಡಲು ಇಚ್ಛಿಸುತ್ತಿದ್ದರು.
ಅವರ ರಾಜಕೀಯ ಗೆಳೆಯರು ಕೂಡ ಅವರನ್ನು ನಂಬುತ್ತಿದ್ದರು. ಯಾವುದೇ ಸಮಸ್ಯೆ ಬಂದರೂ ಮಹಾತ್ಮಾ ಗಾಂಧಿಯವರ ಸಲಹೆ ಸಿಗದಿದ್ದರೆ ಎಲ್ಲರೂ ಹೋಗುತ್ತಿದ್ದರು ಪಟೇಲರ ಬಳಿಗಂತೆ. ಹೀಗಂತ ಆಚಾರ್ಯ ಕೃಪಲಾನಿ ಹೇಳಿದ್ದಾರೆ. 1947ರಲ್ಲಿ ರಾಜಕೀಯ ಹೊಂದಾಣಿಕೆ ಸೂತ್ರದ ಬಗ್ಗೆ ತೀವ್ರ ಮಾತುಕತೆ ನಡೆದು ಉತ್ತುಂಗದಲ್ಲಿರುವಾಗ ಸರೋಜಿನಿ ನಾಯ್ಡು ಅವರನ್ನು ದೃಢ ನಿಶ್ಚಯದ ಕಾರ್ಯಶೀಲ ವ್ಯಕ್ತಿ ಎಂದು ಪಟೇಲರನ್ನು ಕರೆದಿದ್ದರು. ಪ್ರತಿಯೊಬ್ಬರೂ ಪಟೇಲರ ಮಾತುಗಳನ್ನು ನಂಬುತ್ತಿದ್ದರು ಮತ್ತು ಅವರ ಕೆಲಸಗಳನ್ನು ಗೌರವಿಸುತ್ತಿದ್ದರು. ಜಾತಿ, ಧರ್ಮ, ಪಂತ, ವಯಸ್ಸುಗಳನ್ನು ಮೀರಿದ ಅತೀತ ವ್ಯಕ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್.

ಈ ವರ್ಷದ ಸರ್ದಾರ್ ಜಯಂತಿ ನನಗೆ ಮತ್ತು ಭಾರತ ದೇಶಕ್ಕೆ ತುಂಬಾ ವಿಶಿಷ್ಟ. ದೇಶದ 130 ಭಾರತೀಯರ ಹಾರೈಕೆಯಿಂದ ' ಏಕತೆಯ ಮೂರ್ತಿ' ಇಂದು ಉದ್ಘಾಟನೆಗೊಳ್ಳುತ್ತಿದೆ. ನರ್ಮದಾ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಪಟೇಲರ ಮೂರ್ತಿ ವಿಶ್ವದಲ್ಲಿಯೇ ಅತ್ಯಂತ ಎತ್ತರವಾದದ್ದು. ಭೂಮಿ ಪುತ್ರ ಆಕಾಶದೆತ್ತರಕ್ಕೆ ಬೆಳೆದು ನಿಂತು ನಮಗೆಲ್ಲರಿಗೂ ಮಾರ್ಗದರ್ಶನ ಮಾಡಿ ಸ್ಪೂರ್ತಿಯಾಗಿದ್ದಾರೆ.

ಈ ಹೊತ್ತಿನಲ್ಲಿ ನನ್ನ ಮನಸ್ಸು 2013ರ ಅಕ್ಟೋಬರ್ 31ಕ್ಕೆ ಹೋಗುತ್ತದೆ. ಅಂದಿನಿಂದ ಇಂದಿನವರೆಗೆ ಸರ್ದಾರ್ ಪಟೇಲರಿಗೆ ಗೌರವ ಸೂಚಕವಾಗಿ ಈ ಮೂರ್ತಿ ನಿರ್ಮಿಸಲು ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಹೇಳುತ್ತೇನೆ. ಈ ಸಂದರ್ಭದಲ್ಲಿ ನವ ಭಾರತದ ಉದಯಕ್ಕಾಗಿ ನಾವೆಲ್ಲರೂ ಮುಂದಿನ ಹೆಜ್ಜೆ ಇಡೋಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com