ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಅತಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಅವರ 143ನೇ ಜನ್ಮ ದಿನವನ್ನು ಆಚರಿಸಿದ್ದಾರೆ. ಆದರೆ ಸರ್ದಾರ್ ಪಟೇಲ್ ಅವರು ಆರ್ ಎಸ್ ಎಸ್ ಅನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.
ಇಂದು ಸರ್ದಾರ್ ಪಟೇಲ್ ಅವರು ಬದುಕಿದ್ದರೆ ದೇಶದ ಕಲ್ಯಾಣಕ್ಕಾಗಿ ಮತ್ತೊಂದು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್ ಪೇಜ್ ನಲ್ಲಿ ಬರೆದುಕೊಂಡಿದೆ.
1948ರಲ್ಲಿ ಪ್ರಕಟವಾದ ಹಳೆ ನ್ಯೂಸ್ ಪೇಪರ್ ಒಂದರ ಕ್ಲಿಪಿಂಗ್ ಅನ್ನು ಪೊಸ್ಟ್ ಮಾಡಿರುವ ಕಾಂಗ್ರೆಸ್, ಆರ್ ಎಸ್ ಎಸ್ ಮತ್ತು ಅದರ ಸಿದ್ಧಾಂತ ದೇಶಕ್ಕೆ ಅಪಾಯ ಎಂದು ಬರೆದಿದೆ.
1948ರ ಫೆಬ್ರವರಿ 4ರಂದು ಪ್ರಕಟಣೆ ಹೊರಡಿಸಿದ್ದ ಕೇಂದ್ರ ಸರ್ಕಾರ, ದ್ವೇಷ ಮತ್ತು ಹಿಂಸೆಯನ್ನು ಬಿತ್ತುವ ಶಕ್ತಿಗಳ ದೇಶದ ಸ್ವಾತಂತ್ರ್ಯ ಕಸಿಯುತ್ತಿದ್ದು, ಅಂತಹ ಸಂಘಟನೆಗಳನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಆರ್ ಎಸ್ ಎಸ್ ಅನ್ನು ನಿಷೇಧಿಸಲಾಗಿದೆ ಎಂದು ಹೇಳಿತ್ತು.