ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ

ವಾದ್ರಾ ವಿರುದ್ಧದ ಪ್ರಕರಣದ ಸಮಗ್ರ ತನಿಖೆ ನಡೆಯಲಿದೆ: ಹರಿಯಾಣ ಸಿಎಂ

ಗುರುಗ್ರಾಮ ಭೂ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅವರ....
ಚಂಡೀಗಢ: ಗುರುಗ್ರಾಮ ಭೂ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಉದ್ಯಮಿ ರಾಬರ್ಟ್‌ ವಾದ್ರಾ ಮತ್ತು ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿರುದ್ಧದ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಹೇಳಿದ್ದಾರೆ.
ಸೇಡು ತೀರಿಸಿಕೊಳ್ಳಲು ವಾದ್ರಾ ಹಾಗೂ ಹೂಡಾ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಖಟ್ಟರ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಭ್ರಷ್ಟಾಚಾರವನ್ನು ಕಿತ್ತುಹಾಕಲು ಸಂಪೂರ್ಣ ಬದ್ಧವಾಗಿದೆ ಎಂದರು.
ಸಂಪೂರ್ಣ ಪರಿಶೀಲಿಸಿಯೇ ವಾದ್ರಾ ಹಾಗೂ ಹೂಡಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಮತ್ತು ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಕ್ರಮ ಭೂ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ನಿನ್ನೆಯಷ್ಟೆ ವಾದ್ರಾ ಹಾಗೂ ಹೂಡಾ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಡಿಎಲ್ಎಫ್‌ ಮತ್ತು ಓಂಕಾರೇಶ್ವರ ಪ್ರಾಪರ್ಟೀಸ್‌ ಸಂಸ್ಥೆಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದ್ದಾರೆ.
'ನೂಹ್‌ ನಿವಾಸಿ ಸುರಿಂದರ್‌ ಶರ್ಮಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ' ಎಂದ ಹರ್ಯಾಣ ಪೊಲೀಸರು ಮಾಹಿತಿ ನೀಡಿದ್ದಾರೆ.
'ವಾದ್ರಾ ಅವರಿಗೆ ಸೇರಿದ ಸ್ಕೈ ಲೈಟ್‌ ಹಾಸ್ಪಿಟಾಲಿಟಿ ಕಂಪನಿ ಗುರುಗ್ರಾಮ ಸೆಕ್ಟರ್‌ 83, ಶಿಕೊಪುರ, ಸಿಕಂದರ್‌ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ 7.5 ಕೋಟಿ ರೂಗೆ ಭೂಮಿ ಖರೀದಿಸಿದೆ. ಬಳಿಕ ಅದನ್ನು 55 ಕೋಟಿ ರುಪಾಯಿಗೆ ಮಾರಾಟ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com