ಮನಿ ಲಾಂಡರಿಂಗ್ ನಿಂದ 1,210 ಕೋಟಿ ರು. ಆಸ್ತಿ ಸಂಪಾದಿಸಿದ ಚೋಕ್ಸಿ: ತನಿಖೆಯಿಂದ ಬಹಿರಂಗ

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ ತಲೆ...
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ ತಲೆ ಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅಕ್ರಮ ಹಣ ವಹಿವಾಟಿ(ಮನಿ ಲಾಂಡರಿಂಗ್)ನಿಂದ 1,210 ಕೋಟಿ ರುಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವುದು ತನಿಖೆಯಿಂದ ಬಹಿಂರಗವಾಗಿದೆ.
ಜಾರಿ ನಿರ್ದೇಶನಾಲಯ ಚೋಕ್ಸಿ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಚೋಕ್ಸಿ ಒಡೆತನದ 1 ,210 ಕೋಟಿ ರುಪಾಯಿ ಮೌಲ್ಯದ 41 ಆಸ್ತಿಗಳನ್ನು ಜಪ್ತಿ ಮಾಡಿದೆ.
ಮೆಹುಲ್ ಚೋಕ್ಸಿ ಮತ್ತು ಸಮೂಹದ ಇತರ ಸಂಸ್ಥೆಗಳ ಮೇಲೂ ಇಡಿ ದಾಳಿ ಮುಂದುವರಿಯಲಿದ್ದು, ಸಾಲ ವಂಚನೆ ಮತ್ತು ಅಕ್ರಮ ಹಣಕಾಸು ವ್ಯವಹಾರದಡಿ ದಾಖಲಿಸಲಾದ ಪ್ರಕರಣದಂತೆ ಆಸ್ತಿ ಮತ್ತು ಸೊತ್ತುಗಳ ವಶ ಮುಂದುವರಿಯಲಿದೆ ಎಂದು ಹೇಳಿದೆ. 
ಜಾರಿ ನಿರ್ದೇಶನಾಲಯ ಈ ಹಿಂದೆ ಮುಂಬೈನಲ್ಲಿರುವ ಚೋಕ್ಸಿಗೆ ಸೇರಿದ 15 ಫ್ಲಾಟ್ ಗಳು ಹಾಗೂ 17 ಕಚೇರಿಗಳು, ಕೋಲ್ಕತಾದಲ್ಲಿ ಒಂದು ಮಾಲ್, ಅಲಿಬಾಗ್ ನಲ್ಲಿ ನಾಲ್ಕು ಎಕರೆಯ ಒಂದು ಫಾರ್ಮ್ ಹೌಸ್ ಹಾಗೂ ಮಹಾರಾಷ್ಟ್ರದ ನಾಶಿಕ್ ಮತ್ತು ನಾಗ್ಪುರದಲ್ಲಿ 231 ಎಕರೆ ಜಮೀನನ್ನು ಜಪ್ತಿ ಮಾಡಿತ್ತು. 
ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರಿನ ಮೂಲ ಪ್ರತಿಯ ಪ್ರಕಾರ, ಈ ಹಿಂದೆ ಜಪ್ತಿ ಮಾಡಿದ ಎಲ್ಲಾ ಸ್ಥಿರ ಆಸ್ತಿಗಳು ಅಕ್ರಮ ಹಣ ವಹಿವಾಟಿನಿಂದ ಸಂಪಾದಿಸಿದ್ದು ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತಂತೆ ಕಾನೂನು ಪ್ರಕ್ರಿಯೆ ಆರಂಭವಾಗಿದೆ.  ಭಾರತದ ಕೋರಿಕೆ ಮೇರೆಗೆ ಹಸ್ತಾಂತರ ಕುರಿತಂತೆ ಆ್ಯಂಟಿಗೋ ಹಾಗೂ ಬರ್ಬುಡದ ಉನ್ನತಾಧಿಕಾರಿಗಳು ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ. ಕಾನೂನಿನ ವ್ಯಾಪ್ತಿಯಲ್ಲಿ ಮೆಹುಲ್ ಚೋಕ್ಸಿ ಯನ್ನು ಹಸ್ತಾಂತರ ಮಾಡುವ ಬಗ್ಗೆ ನಾವು ಕಾನೂನು ತಜ್ಞರ ಸಲಹೆ ಪಡೆಯಲಿದ್ದೇವೆ. ಒಂದು ವೇಳೆ ಹಸ್ತಾಂತರ ಮಾಡಲು ಅವಕಾಶವಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಂಟಿಗುವಾ ಮತ್ತು ಬರ್ಬುಡದ ಅರ್ಟಾನಿ ಜನರಲ್ ಸ್ಟೆಡ್ರಾಯ್ ಬೆನ್ಜಮಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com