ಪತಿಯೊಂದಿಗೆ ಸಹಬಾಳ್ವೆ ದೂರದ ಕನಸು: ಕಾಶ್ಮೀರ ಪೊಲೀಸ್ ಪತ್ನಿಯ ಭಾವನಾತ್ಮಕ ಪೋಸ್ಟ್

ಇತ್ತೀಚಿಗೆ ಉಗ್ರರು ಪೊಲೀಸ್ ಸಿಬ್ಬಂದಿಯ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದು, ಇದರಿಂದ ಕಂಗೆಟ್ಟ ಪೊಲೀಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ: ಇತ್ತೀಚಿಗೆ ಉಗ್ರರು ಪೊಲೀಸ್ ಸಿಬ್ಬಂದಿಯ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದು, ಇದರಿಂದ ಕಂಗೆಟ್ಟ ಪೊಲೀಸ್ ಸಿಬ್ಬಂದಿಯೊಬ್ಬರ ಪತ್ನಿ, ಸಮವಸ್ತ್ರದಲ್ಲಿರುವ ಪುರುಷರ ತ್ಯಾಗದ ಬಗ್ಗೆ ಭಾವನಾತ್ಮಕ ಪೋಸ್ಟ್ ವೊಂದನ್ನು ಬರೆದಿದ್ದಾರೆ.
ಪೋಲೀಸರ ಹೆಚ್ಚಿನ ಪತ್ನಿಯರು ತಮ್ಮ ಮಕ್ಕಳನ್ನು ತಾವು ಏಕ ಪೋಷಕರಂತೆ ಬೆಳೆಸುತ್ತಾರೆ. ಆದರೆ ತಮ್ಮ ಗಂಡಂದಿರು ಕರ್ತವ್ಯದಿಂದ ದೂರವಿರುವಿರುವಾಗ ಯಾರೊಬ್ಬರೂ ಪತ್ನಿಯರಿಗೆ ಬೆಂಬಲ ನೀಡುವುದಿಲ್ಲ ಎಂದು ಪೊಲೀಸ್ ಪತ್ನಿ ಆರಿಫಾ ತೌಸಿಫ್ ಎಂಬ ಉದ್ಯೋಗಸ್ಥ ಮಹಿಳೆ ಬರೆದಿದ್ದಾರೆ.
ಪೊಲೀಸ್ ಸಿಬ್ಬಂದಿಯ ಪತ್ನಿಯರಿಗೆ ಪತಿಯೊಂದಿಗೆ ಜೀವನ ನಡೆಸುವುದು ದೂರದ ಕನಸಾಗಿದೆ. ನಾವು ಅವರೊಂದಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುವುದಕ್ಕಾಗಿ ಕಾಯುವುದೇ ನಮ್ಮ ಕಾಯಕವಾಗಿದೆ ಎಂದು ಆರಿಫಾ ತಮ್ಮ ನೋವು ಹಂಚಿಕೊಂಡಿದ್ದಾರೆ.
ಕುಟುಂಬದ ಕಾರ್ಯಕ್ರಮಗಳಲ್ಲಿ ಅಥವಾ ಇತರೆ ಯಾವುದೇ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾವಹಿಸಬೇಕು ಎಂದು ಯೋಜನೆ ಹಾಕುತ್ತೇವೆ. ಆದರೆ ಅದು ಎಂದಿಗೂ  ಸಂಭವಿಸುವುದಿಲ್ಲ. ಇದು ಏಕ ಪೋಷಕರ ಬಗ್ಗೆ ಮಾತ್ರವಲ್ಲ. ನಾವು ಅತಿದೊಡ್ಡ ಸುಳ್ಳುಗಾರರಾಗಿದ್ದೇವೆ ಎಂದು ಆರಿಫಾ ಸ್ಥಳೀಯ ಸುದ್ದಿ ವೆಬ್ ಸೈಟ್ ವೊಂದರ ಲೇಖನದಲ್ಲಿ ಬರೆದಿದ್ದಾರೆ.
ಮುಂದಿನ ವಾರ ಅಥವಾ ಮುಂದಿನ ಹಬ್ಬಕ್ಕೆ ನಿಮ್ಮ ತಂದೆ ಮನೆ ಬರುತ್ತಾರೆ ಎಂದು ಸುಳ್ಳು ಹೇಳಿ ಮಕ್ಕಳನ್ನು ಹೇಗೆ ನಂಬಿಸುವುದು ಎಂದು ಆರಿಫಾ ಪ್ರಶ್ನಿಸಿದ್ದಾರೆ.
ನಿಮ್ಮ ತಂದೆ ಈ ಶನಿವಾರ ಮನೆಗೆ ಬರುತ್ತಾರೆ, ಈ ಹಬ್ಬಕ್ಕೆ ಮನೆಗೆ ಬರುತ್ತಾರೆ ಎಂದು ನಾವು ಸದಾ ಮಕ್ಕಳಿಗೆ ಸುಳ್ಳು ಹೇಳುತ್ತಿರುತ್ತೇವೆ. ಅಲ್ಲದೆ ಶಾಲೆಯಲ್ಲಿ ಪೋಷಕರ ಸಭೆಗೆ ಅಪ್ಪ ಬರುತ್ತಾರೆ ಎಂದು ಸಹ ಸುಳ್ಳು ಹೇಳಬೇಕಾಗಿದೆ ಎಂದು ಆರಿಫಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com