ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಎಂ. ಕರುಣಾನಿಧಿ ಅವರ ಕುಟುಂಬದೊಳಗಿನ ಕಲಹ ಮತ್ತಷ್ಟು ತೀವ್ರಗೊಂಡಿದ್ದು, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಅಣ್ಣ ಹಾಗೂ ಪಕ್ಷದ ಉಚ್ಚಾಟಿತ ನಾಯಕ ಎಂ.ಕೆ.ಅಳಗಿರಿ ಅವರು ಬುಧವಾರ ತಮ್ಮ ತಂದೆಯ ಸಮಾಧಿ ಬಳಿ ಶಕ್ತಿ ಪ್ರದರ್ಶನ ಮಾಡಿದರು.
ಅಳಗಿರಿ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಟ್ರಿಪ್ಲಿಕೇನ್ ನಿಂದ ಮರೀನಾ ಬೀಚ್ ನಲ್ಲಿರುವ ತಮ್ಮ ತಂದೆ ಕರುಣಾನಿಧಿ ಅವರ ಸಮಾಧಿಯರೆಗೆ ಶಾಂತಿ ರ್ಯಾಲಿ ನಡೆಸುವ ಮೂಲಕ ಗೌರವ ಸಲ್ಲಿಸಿದರು.
ತಂದೆ ಸಮಾಧಿಗೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ಕಲೈನಾರ್ ಗೆ ಗೌರವ ಸಲ್ಲಿಸುವದಕ್ಕಾಗಿ ಈ ರ್ಯಾಲಿ ನಡೆಸಲಾಗಿದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ, ತಮ್ಮನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಪಕ್ಷದ ಪದಾಧಿಕಾರಿಗಳನ್ನು ಡಿಎಂಕೆಯಿಂದ ಉಚ್ಚಾಟಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅಳಗಿರಿ, ತಾಕತ್ತಿದ್ದೆ ನಮ್ಮ ರ್ಯಾಲಿಯಲ್ಲಿ ಭಾಗವಹಿಸಿದ 1.50 ಲಕ್ಷ ಕಾರ್ಯಕರ್ತರನ್ನು ಉಚ್ಚಾಟಿಸಲಿ ಎಂದು ಸವಾಲು ಹಾಕಿದರು.
ಅಳಗಿರಿ ಅವರ ಅನೇಕ ಬೆಂಬಲಿಗರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇವತ್ತು ಚೆನ್ನೈನಲ್ಲಿ ಅಳಗಿರಿ ಅವರನ್ನು ಬರಮಾಡಿಕೊಂಡ ಡಿಎಂಕೆಯ ಸ್ಥಳೀಯ ಮುಖಂಡ ರವಿ ಅವರನ್ನು ಅಮಾನತು ಮಾಡಲಾಗಿತ್ತು.
ಮೂವತ್ತು ದಿನಗಳ ಹಿಂದೆ ಕರುಣಾನಿಧಿ ಸಾವನ್ನಪ್ಪಿದ ನಂತರ ಅಳಗಿರಿ ಅವರು ಪಕ್ಷಕ್ಕೆ ಮರಳಲು ಪ್ರಯತ್ನಿಸುತ್ತಲೇ ಇದ್ದಾರೆ. ಡಿಎಂಕೆ ಪಕ್ಷ ಹಾಗೂ ಕರುಣಾನಿಧಿ ಅವರ ನಿಜವಾದ ಬೆಂಬಲಿಗರು ಹಾಗೂ ಹಿತೈಷಿಗಳು ತಮ್ಮೊಂದಿಗಿದ್ಧಾರೆ ಎಂದು ಅಳಗಿರಿ ಅವರು ಪದೇಪದೇ ಹೇಳಿಕೊಂಡುಬರುತ್ತಲೇ ಇದ್ದಾರೆ. ಆದರೆ, ಸ್ಟಾಲಿನ್ ಇದಕ್ಕೆ ಆಸ್ಪದ ಕೊಡುತ್ತಿಲ್ಲ. ಈಗ ಅಳಗಿರಿ ಅನಿವಾರ್ಯವಾಗಿ ಚೆನ್ನೈನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುವ ಮೂಲಕ ಪಕ್ಷಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.