ನವದೆಹಲಿ: 1991ರಲ್ಲಿ ನಡೆದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಎ.ಜಿ. ಪೆರಾರಿವಲನ್ ಅವರ ಕ್ಷಮಾದಾನ ಅರ್ಜಿ ಪರಿಗಣಿಸಿ ಎಂದು ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಸೂಚನೆ ನಿಡಿದೆ.
ನ್ಯಾಯಮೂರ್ತಿಗಳಾದ ರಂಜನ್ ಗೊಗೊಯಿ, ನವೀನ್ ಸಿನ್ಹಾ ಮತ್ತು ಕೆ. ಎಂ. ಜೋಸೆಫ್ ಅವರ ಪೀಠ ತಮಿಳುನಾಡು ಸರಕಾರ ಸಲ್ಲಿಸಿದ ದೋಷಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಅರ್ಜಿಯನ್ನು ವಿಲೇವಾರಿ ಮಾಡಿದೆ.
ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವ ತಮಿಳುನಾಡು ಸರಕಾರದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರವು ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.
ಆದರೆ ಎರಡು ವರ್ಷಗಳ ಹಿಂದೆ ತಮಿಳುನಾಡು ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ ಪೆರಾರಿವಲನ್ ಕುರಿತಂತೆ ರಾಜ್ಯಪಾಲರು ಯಾವ ತೀರ್ಮಾನಕ್ಕೆ ಬರದ ಹಿನ್ನೆಲೆಯಲ್ಲಿ ಆ. 20ರಂದು ಅವನು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದ.
ರಾಜೀವ್ ಗಾಂಧಿ ಹತ್ಯೆಗೆ ಬಳಸಿದ್ದ ಬೆಲ್ಟ್ ಬಾಂಬ್ ಗಾಗಿ 9 ವೋಲ್ಟ್ ಬ್ಯಾಟರಿಗಳನ್ನು ಸರಬರಾಜು ಮಾಡಿದ್ದ ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಪೆರಾರಿವಲನ್ ಗೆ ಶಿಕ್ಷೆ ಯಾಗಿತ್ತು.
1991 ರ ಮೇ 21 ರಂದು ತಮಿಳುನಾಡಿನ ಶ್ರೀಪೆರುಂಬುದೂರ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಧನು ಎಂಬ ಮಹಿಳಾ ಆತ್ಮಹತ್ಯಾ ಬಾಂಬರ್ ನಿಂದ ರಾಜೀವ್ ಗಾಂಧಿ ಹತ್ಯೆಗೀಡಾದರು. ಧನು ಸೇರಿದಂತೆ 14 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದರು.