2019ರ ಚುನಾವಣೆ ನರೇಂದ್ರ ಮೋದಿ v/s ಭಾರತ: ಪ್ರತಿಪಕ್ಷ ನಾಯಕರು

ಭಾರತೀಯ ಚುನಾವಣೆಗಳು ಸಿದ್ದಾಂತಗಳನ್ನು ಆಧರಿಸಿಕೊಂಡು ಇರುತ್ತದೆಯೇ ಹೊರತು ವ್ಯಕ್ತಿತ್ವಗಳನ್ನು ಅಲ್ಲ ಎಂದು ಪ್ರತಿಪಕ್ಷದ ನಾಯಕರು ಪ್ರತಿಪಾದಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ಮೋದಿ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭಾರತೀಯ ಚುನಾವಣೆಗಳು ಸಿದ್ದಾಂತಗಳನ್ನು ಆಧರಿಸಿಕೊಂಡು ಇರುತ್ತದೆಯೇ ಹೊರತು ವ್ಯಕ್ತಿತ್ವಗಳನ್ನು ಅಲ್ಲ ಎಂದು ಪ್ರತಿಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ಮೋದಿ ಮತ್ತು ಭಾರತ ಮಧ್ಯೆ ನಡೆಯಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಈ ಮಾತಿಗೆ ವೇದಿಕೆಯಾಗಿದ್ದು ಕಾಂಗ್ರೆಸ್ ಸಂಸದೀಯ ಕಪಿಲ್ ಸಿಬಲ್ ಅವರು ಬರೆದಿರುವ ಪುಸ್ತಕ ''ಶೇಡ್ಸ್ ಆಫ್ ಟ್ರುತ್- ಅ ಜರ್ನಿ ಡಿರೈಲ್ಡ್'' ಬಿಡುಗಡೆ ಕಾರ್ಯಕ್ರಮದಲ್ಲಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಒಕ್ಕೂಟವನ್ನು ಎದುರಿಸಲು ಒಂದು ವಿಸ್ತಾರವಾದ ಕಾರ್ಯತಂತ್ರದ ಒಕ್ಕೂಟ ರಚನೆಗೆ ವೇದಿಕೆ ಸಿದ್ಧವಾಗುತ್ತಿದ್ದು ಕನಿಷ್ಠ 25 ರಾಜ್ಯಗಳಲ್ಲಿ ಅದು ರಚನೆಯಾಗಲಿದೆ ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ  ನಡೆಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ಕಪಲ್ ಸಿಬಲ್, ಪಿ ಚಿದಂಬರಂ, ಸೀತಾರಾಮ್ ಯೆಚೂರಿ, ಚಂದನ್ ಮಿತ್ರಾ ಮತ್ತು ಶರದ್ ಯಾದವ್ ಅವರಿಂದ ತಜ್ಞರ ತಂಡ ಚರ್ಚೆ ನಡೆಯಿತು. ಅದರಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಎನ್ ಡಿಎಯನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಮುಂದಿನ ಚುನಾವಣೆಗೆ ವಿರೋಧ ಪಕ್ಷಗಳೆಲ್ಲಾ ಒಟ್ಟಾಗುವ ಅವಶ್ಯಕತೆಯಿದ್ದು ಕನಿಷ್ಟವೆಂದರೂ 25 ರಾಜ್ಯಗಳು ವಿಸ್ತಾರವಾದ ಕಾರ್ಯತಂತ್ರದೊಂದಿಗೆ ಬಿಜೆಪಿಯನ್ನು ಎದುರಿಸಬೇಕು ಎಂದು ಪ್ರತಿಪಾದಿಸಿದರು.

ಉತ್ತರ ಭಾರತದ ರಾಜ್ಯಗಳು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಬಿಹಾರಗಳು ಇಂದು ಎನ್ ಡಿಎಯ ಆಡಳಿತ ಹೊಂದಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಸಿಬಲ್ ಹೇಳಿದರು. ಹಾಗಾದರೆ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಯುಪಿಎಯಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಿದ್ದಕ್ಕೆ ತೃಣಮೂಲ ಕಾಂಗ್ರೆಸ್ ನ ಚಂದನ್ ಮಿತ್ರಾ ಹೊರತುಪಡಿಸಿ ತಜ್ಞರ ತಂಡದ ಎಲ್ಲಾ ಸದಸ್ಯರು ಪ್ರಧಾನಿ ಅಭ್ಯರ್ಥಿ ಮುಖ್ಯವಾಗುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರದ್ ಯಾದವ್ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸದೆ ಜಂಟಿ ಸಮ್ಮಿಶ್ರ ಪಕ್ಷಗಳು ಈ ಹಿಂದೆ ಸರ್ಕಾರವನ್ನು ರಚಿಸಿವೆ ಎಂದು ಮೆಲುಕು ಹಾಕಿದರು. ಆಗ ಮಧ್ಯೆ ಮಾತನಾಡಿದ ಚಂದನ್ ಮಿತ್ರಾ ನಂತರ ಯಮುನಾ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಇಂದು ಮತದಾರರು ಬಹಳ ಮುಂದುವರಿದಿದ್ದಾರೆ. ಹಾಗಾಗಿ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವುದು ಮುಖ್ಯ ಎಂದು ಹೇಳಿದರು. ಯುಪಿಎಯಿಂದ ಪ್ರಧಾನ ಮಂತ್ರಿ ಅಭ್ಯರ್ಥಿ ಸ್ಥಳೀಯ ಮಟ್ಟದ ಪಕ್ಷದ ನಾಯಕರಾಗಬೇಕಿದ್ದು ಅವರ ಸಾಮರ್ಥ್ಯ ಈಗಾಗಲೇ ಸಾಬೀತಾಗಿರುವಂತವರಾಗಿರಬೇಕು ಎಂದರು.

ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಕಪಿಲ್ ಸಿಬಲ್ ಮೋದಿಯವರ ಎದುರಿಗೆ ನಿಲ್ಲಲು ಸಿದ್ದವಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಅವರು ತಯಾರಿದ್ದಾರೆಯೇ, ಇಲ್ಲವೇ ಎಂಬ ಬಗ್ಗೆ ಪ್ರಶ್ನೆ ಏಳುವ ಸಾಧ್ಯತೆಯೇ ಇಲ್ಲ. ರಾಹುಲ್ ಗಾಂಧಿಯವರು ಇದನ್ನು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ಚುನಾವಣೆಗೆ ಮುನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ಮುಖ ಮುಖ್ಯವಲ್ಲ ಎಂದರು.

2014ರ ಲೋಕಸಭೆ ಚುನಾವಣೆಗೆ ಮುನ್ನ ದೇಶದಲ್ಲಿ ಪ್ರಬಲ ನಾಯಕತ್ವ ಬೇಕು ಎಂಬ ಬಗ್ಗೆ ಚರ್ಚೆ ಕೇಳಿಬಂತು. ನಂತರ ಮೋದಿಯವರು ಪ್ರಧಾನಿಯಾಗಿ ನಮಗೆಲ್ಲ ನೋಟುಗಳ ಅಮಾನ್ಯೀಕರಣವನ್ನು ತಂದರು. ಇದೀಗ ಮುಂದಿನ ವರ್ಷ ನಡೆಯುವ ಚುನಾವಣೆ ಮೋದಿ v/s ಭಾರತ ಎಂದು ಶರದ್ ಯಾದವ್ ಹೇಳಿದಾಗ ತಂಡದ ಉಳಿದ ಸದಸ್ಯರು ದೃಢವಾಗಿ ಒಪ್ಪಿಕೊಂಡರು. ಅದಕ್ಕೆ ಇತರ ನಾಯಕರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯಗಳ ಸ್ಥಳೀಯ ಪಕ್ಷಗಳು ಮುಖ್ಯವಾಗುತ್ತದೆ ಎಂದು ಕೂಡ ತಂಡದ ಸದಸ್ಯರು ಹೇಳಿದರು. ಕೇಂದ್ರ ಮಾಜಿ ಸಚಿವ ಚಿದಂಬರಂ ಮಾತನಾಡಿ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾರರ ಒಲವು ಚುನಾವಣೆಗೆ ಮುುನ್ನ ಕಂಡುಬಂದಿದ್ದರೂ ಕೂಡ ಪಂಜಾಬ್, ಪಶ್ಚಿಮ ಬಂಗಾಳ, ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ ಬಿಜೆಪಿ ಸೋತಿತು ಎಂದರು.

ನಿನ್ನೆ  ನಡೆದ ಚರ್ಚೆಯಲ್ಲಿ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ನಾಯಕರಾದ ಫಾರೂಕ್ ಅಬ್ದುಲ್ಲಾ, ಸೀತಾರಾಮ್ ಯೆಚೂರಿ, ಶರದ್ ಯಾದವ್, ಪವನ್ ವರ್ಮ, ಚಂದನ್ ಮಿತ್ರಾ, ಮಲ್ಲಿಕಾರ್ಜುನ ಖರ್ಗೆ, ಸಮನ್ ಖುರ್ಷಿದ್, ಶಶಿ ತರೂರ್ ಮೊದಲಾದವರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com